ತಾಳಿಕೋಟಿ ತಾಲೂಕಿನ ಪಡೇಕನೂರ ಗ್ರಾಮದಲ್ಲಿ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ, ಸಿಇಒ ರಿಷಿ ಆನಂದ
ವಿಜಯಪುರ, ಮಾರ್ಚ್ 11:ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಳಿಕೋಟಿ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡೇಕನೂರ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿದ ಅವರು, ಅಂಗನವಾಡಿ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ಮಕ್ಕಳ ಕಲಿಕಾ ಸಾಮರ್ಥ್ಯ ಗುಣಮಟ್ಟ ಹೆಚ್ಚಿಸಿ ಕಲಿಕೆಗೆ ಆದ್ಯತೆ ನೀಡಬೇಕು. ಅಡುಗೆ ಕೊಠಡಿ ಸ್ವಚ್ಚತೆಗೆ ನಿರಂತರ ಶುಚಿತ್ವ ಕಾಪಾಡಬೇಕು. ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ, ಮಕ್ಕಳ ಆರೋಗ್ಯ ತಪಾಸಣಾ ವರದಿ ಸೇರಿದಂತೆ ವಿವಿಧ ಮಾಹಿತಿ ದಾಖಲೆ ಪರಿಶೀಲನೆ ನಡೆಸಿದರು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಮಕ್ಕಳಿಗೆ ಸಮಯಾನುಸಾರ ಪೌಷ್ಠಿಕ ಆಹಾರ ವಿತರಣೆಗೆ ಕ್ರಮವಹಿಸಬೇಕು. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಮಕ್ಕಳನ್ನು ನೆರಳಿನಲ್ಲಿಯೇ ಪಾಲನೆ ಮಾಡಬೇಕು ಎಂದು ಅಂಗನವಾಡಿ ಸಿಬ್ಬಂದಿಗೆ ಸೂಚನೆ ನೀಡಿದರು.
ಇದೇ ವೇಳೆ, ಪಡೇಕನೂರ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಪಡೇಕನೂರ ಗ್ರಾಮಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಿರ್ಮಾಣ ಮಾಡಲು ಬಾಕಿ ಇದ್ದ ಸ್ಥಳಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಮತ್ತು ಪಡೇಕನೂರ ಗ್ರಾಮದಿಂದ ಕೊಣ್ಣೂರ ಗ್ರಾಮದವರೆಗೆ ಸಿಸಿ ರಸ್ತೆ ಕಾಮಗಾರಿಗಳ ನಿರ್ಮಾಣದ ಅವಶ್ಯಕತೆ ಕುರಿತು ಪರಿಶೀಲನೆ ಮಾಡಿದರು.
ನಂತರ ಪ್ರಗತಿ ಹಂತದಲ್ಲಿರುವ ಪಡೇಕನೂರ ಗ್ರಾಮದಿಂದ ಹಳ್ಳೂರ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ಕ್ರಮವಹಿಸಬೇಕು ಮತ್ತು ಉತ್ತಮ ಗುಣಮಟ್ಟದ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜನಿಯರಿಂಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ವಿದ್ಯಾಧರ ನ್ಯಾಮಗೌಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವರಾಜ ನಾಯಕ, ಕಿರಿಯ ಅಭಿಯಂತರರಾದ ಸಂತೋಷ ಲಮಾಣಿ, ತಾಲೂಕ ಪಂಚಾಯತಿ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.



















