ದೇಶದ ಆರ್ಥಿಕ ವ್ಯವಸ್ಥೆ ಬದಲಾವಣೆ ಶಿಲ್ಪಿ ಮಾಜಿ ಪ್ರಧಾನಿ ಮನಮೋಹನಸಿಂಗ್ ಇನ್ನಿಲ್ಲ..!
Voiceofjanata DESK NEWS : ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಜೊತೆಗೆ ನಾಳೆ (ಡಿ.27)ರಂದು ಸರ್ಕಾರಿ ರಜೆ ಘೋಷಿಸಲಾಗಿದೆ.
ಆಧುನಿಕ ಭಾರತದ ಕೀರ್ತಿ ಪತಾಕೆಯನ್ನು ಜಗದೆತ್ತರಕ್ಕೆ ಏರಿಸಿದ್ದ ಆರ್ಥಿಕ ತಜ್ಞ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (92) ಅವರು ಗುರುವಾರ ರಾತ್ರಿ 9.51ಕ್ಕೆ ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಶನಿವಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯಕರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಾತನಾಡಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ಶನಿವಾರ ನಡೆಯಲಿದೆ. ಈ ಕುರಿತು ಅಧಿಕೃತ ಮಾಹಿತಿಯನ್ನು ಶುಕ್ರವಾರ ತಿಳಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಡಾ. ಮನಮೋಹನ್ ಸಿಂಗ್ ಅವರ ನಿಧನ ದೇಶಕ್ಕಾಗಿರುವ ದೊಡ್ಡ ನಷ್ಟ. “ಡಾ. ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಮತ್ತು ದೇಶದ ನಿಜವಾದ ಮಾದರಿ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯ ನಂತರದ ಹೀರೋ ಮನಮೋಹನ್ ಸಿಂಗ್. ಅವರ ಧ್ಯೇಯ ಮತ್ತು ದೇಶವನ್ನು ಆಳುವ ಸಾಮರ್ಥ್ಯ ಎಲ್ಲರಿಗೂ ಸಾಕ್ಷಿಯಾಗಿದೆ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಡಿಸೆಂಬರ್ 28 ರಂದು ನಡೆಯಲಿರುವ ಕಾಂಗ್ರೆಸ್ ಸಂಸ್ಥಾಪನಾ ದಿನ ಸೇರಿದಂತೆ ಏಳು ದಿನಗಳ ಕಾಲ ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಈ ನಡುವೆ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಏಮ್ಸ್ ನಿಂದ ಗುರುವಾರ ತಡರಾತ್ರಿ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಅವರ ನಿವಾಸಕ್ಕೆ ತಲುಪಿದ್ದು, ಇಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.