52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ
ವರದಿ: ಚೇತನ್ ಕುಮಾರ್ ಎಲ್
ಹನೂರು: ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ವತಿಯಿಂದ ಬುಧವಾರ ನಡೆಸಲಾದ 52ನೇ ದಿನದ ಶಾಂತಿಯುತ ಅಹೋರಾತ್ರಿ ಧರಣಿಯಲ್ಲಿ ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳ ನಾಗಪ್ಪ ಭಾಗವಹಿಸಿ ಧರಣಿಗೆ ಬೆಂಬಲ ಸೂಚಿಸಿದರು.
ನಂತರ ಮಾತನಾಡಿದ ಅವರು, ದಿನಾಂಕ 27-10-2025ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಒದಗಿಸುವಂತೆ ಹಾಗೂ ಇತರೆ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ 52 ದಿನಗಳು ಕಳೆದರೂ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ದೊರಕದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ರೈತರು ದಂಟಳ್ಳಿ ಏತನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಧರಣಿ ನಡೆಸುತ್ತಿರುವುದು ಸಂಪೂರ್ಣ ಸಮಂಜಸವಾಗಿದೆ. ಈ ಯೋಜನೆ ಜಾರಿಯಾದರೆ ನಾಲ್ಕು–ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಬರಗಾಲದ ಸಮಸ್ಯೆಯನ್ನು ತಡೆಯಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಸಂಸದರು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ, ತುರ್ತು ಕ್ರಮ ಕೈಗೊಂಡು ಯೋಜನೆ ಜಾರಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಈ ಧರಣಿಯಲ್ಲಿ ರೈತ ಮುಖಂಡರಾದ ಆರ್. ಅರ್ಪುದರಾಜ್, ಮಾಜಿ ಯೋಧರಾದ ಮಾರಿಯ ಜೋಸೆಫ್, ಅರುಣ್, ಸೂಸೈಮಾಣಿಕ್ಯಂ, ಪೌಲ್ ಧರ್ಮರಾಜ್, ಸಿರಿಲ್, ಸಗಾಯರಾಜು, ಜಪಮಾಲೆ, ಪೀಟರ್, ಫ್ರಾನ್ಸಿಸ್, ಶಿವಣ್ಣ, ಅಂಥೋನಿ ಸ್ವಾಮಿ, ಹಾಜರಿದ್ದರು.



















