ಸಿರವಾರ: ಪಟ್ಟಣದಲ್ಲಿ ತೆರೆದ ಜೋಳ ಖರೀದಿ ಕೇಂದ್ರದ ಅವಧಿಯನ್ನು ಹೆಚ್ಚಿಸಬೇಕು ಎಂದು ರೈತ ಮುಖಂಡ ಮಹಮ್ಮದ ಹುಸೇನ್ ಮತ್ತು ಪಟ್ಟಣದ ಪಂಚಾಯತ್ ಸದಸ್ಯ ಹಾಜಿ ಚೌದ್ರಿ ಒತ್ತಾಯಿಸಿದ್ದಾರೆ.
ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ಸರಕಾರ ರಾಜ್ಯಾದ್ಯಂತ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿತ್ತು. ಜನೇವರಿ 1 ರಿಂದ ಮಾರ್ಚ್ 31 ರವರೆಗೆ ಅವಧಿ ನೀಡಿತ್ತು. ಸರಕಾರದ ಸೂಚನೆಯಂತೆ ರಾಜ್ಯಾದ್ಯಂತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಪಟ್ಟಣದಲ್ಲಿ ಮಾತ್ರ ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಅವಧಿ ಮುಗಿಯಲು ಇನ್ನೂ ಎರಡು ದಿನ ಬಾಕಿ ಇದ್ದಾಗ ಬುಧವಾರ ಏಕಾಏಕಿ ಖರೀದಿ ಕೇಂದ್ರವನ್ನು ಪಟ್ಟಣದಲ್ಲಿ ತೆರೆದಿದ್ದಾರೆ. ಸಾಕಷ್ಟು ರೈತರಿಗೆ ಇದರ ಬಗ್ಗೆ ಮಾಹಿತಿ ಇಲ್ಲಾ. ಆದ್ದರಿಂದ ನೀಡಿರುವ ಅವಧಿಯನ್ನು ಏಪ್ರಿಲ್ 10 ರವರೆಗೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.