ಭಾರತೀಯ ಕಿಸಾನ್ ಸಂಘ ಹನೂರು ತಾಲೂಕು ಘಟಕದ ವತಿಯಿಂದ ವಿದ್ಯುತ್ ಇಲಾಖೆ ವಿರುದ್ಧ ಪ್ರತಿಭಟನೆ..
ಹನೂರು : ಭಾರತೀಯ ಕಿಸಾನ್ ಸಂಘ ಹನೂರು ಘಟಕದ ವತಿಯಿಂದ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತ್ತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದವರು ಹನೂರು ತಾಲೂಕಿನದ್ಯಂತ ರೈತರ ಪಂಪಸೆಟ್ ಗಳಿಗೆ ನಿಗದಿತ ಪ್ರಮಾಣದ ವಿದ್ಯುತ್ ಪೂರೈಕೆ ಮಾಡದೆ ಲೋಡ್ ಶೆಡ್ಡಿಂಗ್ ನೆಪವೊಡ್ಡಿ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುವುದರ ಮುಖೇನ ರೈತರಿಗೆ ನಿರಂತರವಾಗಿ ತೊಂದರೆ ಕೊಡುತ್ತಿರುವ ಚೆಸ್ಕಾಂ ಅಧಿಕಾರಿಗಳ ಆಡಳಿತ ವೈಖರಿ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಆಗಸ್ಟ್ 18 ಶುಕ್ರವಾರದಂದು 1.30ಗಂಟೆಗೆ ಪಟ್ಟಣದ ಮಹದೇಶ್ವರ ಬೆಟ್ಟ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ನಿಂದ ಪ್ರತಿಭಟನೆ ಪ್ರಾರಂಭಿಸಿ ಮೆರವಣಿಗೆ ಮೂಲಕ ರೈತ ವಿರೋಧಿ ಚೆಸ್ಕಾಂ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಣಿ ನಿರ್ಮಿಸಿ ಚೆಸ್ಕಾಂ ವಿರುದ್ಧ ಘೋಷಣೆಯನ್ನು ಕೂಗಿದರು. ನಂತರ ಚೆಸ್ಕಾಂ ಕಚೇರಿಯ ಮುಂಭಾಗ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಅಧೀಕ್ಷಕ ಇಂಜಿನಿಯರ್ ತಾರಾ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ ಇರುವುದರಿಂದ ರೈತರಿಗೆ ನೀಡಬೇಕಾಗಿದ್ದ ಏಳು ಗಂಟೆಯ ತ್ರೀ ಪೀಸ್ ವಿದ್ಯುತ್ ಅನ್ನು ನೀಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ವಿದ್ಯುತ್ತನ್ನು ನೀಡಲಾಗುವುದು ಎಂದು ತಿಳಿಸಿದರು.
ಆದರೆ ರೈತರು ನಾಳೆಯಿಂದಲೇ ಏಳು ಗಂಟೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು. ತಾರಾ ಅವರು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು ಎಸ್, ಎಇಇ ಶಂಕರ್, ಎಇ ರಂಗಸ್ವಾಮಿ, ಭಾರತೀಯ ಕಿಸಾನ್ ಸಂಘದ ಹನೂರು ಘಟಕದ ಅಧ್ಯಕ್ಷರಾದ ವಿ ಎಸ್ ದೊಡ್ಡಿ ಹರೀಶ್, ಪ್ರಾಂತ್ಯ ಅಧ್ಯಕ್ಷ ರಾಮಾಪುರ ರಾಜೇಂದ್ರ, ಜಿಲ್ಲಾ ಕಾರ್ಯದರ್ಶಿ ಬೋಸ್ಕೋ, ಜಿಲ್ಲಾ ಅಧ್ಯಕ್ಷ ಲಿಂಗರಾಜ್, ಕೊಳ್ಳೇಗಾಲ ಘಟಕ ಅಧ್ಯಕ್ಷ ಶಾಂತ ಮಲ್ಲಪ್ಪ, ಹನೂರು ಘಟಕ ಉಪಾಧ್ಯಕ್ಷ ಬಸವರಾಜ್ ಹಾಗೂ ಸಂಘದ ಮಾಜಿ ಅಧ್ಯಕ್ಷ ನಟರಾಜ್, ಸಿದ್ದಯ್ಯ, ದೇವಿಕಾ ಸೇರಿದಂತೆ ಎಲ್ಲಾ ಸದಸ್ಯರು ಭಾಗವಹಿಸಿದ್ದರು.