ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರಿಗೆ, ಖಡಕ್ ಎಚ್ಚರಿಕೆ -ಜಿಲ್ಲಾಧಿಕಾರಿ ಟಿ.ಭೂಬಾಲನ್
ವಿಜಯಪುರ ಫೆ.14 : ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ಮೇಲೆ ಕಾನೂನಿನ ರಿತ್ಯ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಚಡಚಣ ತಾಲೂಕಿನ ಸರಕಾರಿ ಭೂಮಾಪಕರಾದ ಮಹಾಂತಪ್ಪ ಶ್ರೀಶೈಲ ಸಜ್ಜನ ಅವರು ಲೋಣಿ ಬಿ.ಕೆ. ಗ್ರಾಮದಲ್ಲಿ ಸರಕಾರಿ ರಸ್ತೆ ಅಳತೆ ಕಾರ್ಯಕ್ಕೆ ಹೋದಾಗ ವಿಕಾಸ ತಂ.ಕಲ್ಲನಗೌಡ ಪಾಟೀಲ, ರವೀಂದ್ರ ಗುರಪ್ಪ ಕಾಂಬಳೆ, ಸಿದ್ರಾಮ ಗಿರಿಮಲ್ಲ ಉಟಗಿ, ವಿಕಾಸ ಜೀವಪ್ಪ ಕಾಂಬಳೆ ಹಾಗೂ ಸಿದ್ದಲಿಂಗಪ್ಪ ಕಲ್ಲನಗೌಡ ಪಾಟೀಲ ಎಂಬುವರು ಸರ್ವೇಯರ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಐದು ಜನ ಅಪಾದಿತರ ಪೈಕಿ ಸಿದ್ರಾಮ ಗಿರಿಮಲ್ಲ ಉಟಗಿ ಹಾಗೂ ಸಿದ್ದಲಿಂಗಪ್ಪ ಕಲ್ಲನಗೌಡ ಪಾಟೀಲ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂತಹ ಯಾವುದೇ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ವಹಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.