ಡಾ. ಸಂಗಣ್ಣ ಸಿಂಗೆ ಅವರ ನೆನಪು ಕವನ ಸಂಕಲನ ಬಿಡುಗಡೆ
ಅಫಜಲಪುರ: ನಾಡು, ನುಡಿಗಾಗಿ ರಾಜಕೀಯ, ಸಂಘ, ಸ್ವಾರ್ಥ ಬಿಟ್ಟು ಒಟ್ಟಾಗಿ ಕೆಲಸ ಮಾಡೋಣ ಎಂದು ಶಾಸಕ ಎಂ. ವೈ ಪಾಟೀಲ್ ಹೇಳಿದರು.
ಅವರು ಪಟ್ಟಣ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಸಾಪ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಕಸಾಪ ಗೌರವ ಕಾರ್ಯದರ್ಶಿ, ಸಾಹಿತಿ ಡಾ. ಸಂಗಣ್ಣ ಎಂ ಸಿಂಗೆ ಆನೂರ ಅವರು ಬರೆದ ನೆನಪು ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಮ್ಮದು ಮಹಾರಾಷ್ಟಕ್ಕೆ ಹೊಂದಿಕೊಂಡ ತಾಲೂಕು ಆಗಿದ್ದರೂ ಕೂಡ ಕನ್ನಡ ತನವನ್ನು ಬಿಟ್ಟು ಕೊಟ್ಟಿಲ್ಲ. ಕನ್ನಡವನ್ನು ಇನ್ನಷ್ಟು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಹೆಚ್ಚು ಕೆಲಸ ಮಾಡಬೇಕಾಗಿದೆ. ಕಸಾಪ ವತಿಯಿಂದ ಕೈಗೊಳ್ಳುವ ಪ್ರತಿಯೊಂದು ಚಟುವಟಿಕೆಗಳಿಗೆ ನನ್ನ ಬೆಂಬಲ, ಸಹಕಾರ ಇರಲಿದೆ ಎಂದ ಅವರು ಡಾ. ಸಂಗಣ್ಣನವರು ಬರೆದ ನೆನಪು ಕವನ ಸಂಕಲನ ಬಹಳ ಸೊಗಸಾಗಿ ಮೂಡಿ ಬಂದಿದೆ.
ಒಂದೊಂದು ಕವನವು ಸಾಮಾಜಿಕ ಬದುಕು, ಸಾಹಿತ್ಯ, ಬಡವರ ಯಾತನೆ, ಪ್ರಸ್ತುತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವಂತಿವೆ. ಅವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ ಎಂದು ಹಾರೈಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡುತ್ತಾ ಶಿಕ್ಷಕರೇ ನಮ್ಮ ಭವಿಷ್ಯದ ನಾಡು ಕಟ್ಟುವ ಶಿಲ್ಪಿಗಳಾಗಿದ್ದಾರೆ. ಹೀಗಾಗಿ ಅವರಿಗೆ ಕಸಾಪ ಜವಾಬ್ದಾರಿ ಕೊಟ್ಟಿದ್ದರಿಂದ ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕನ್ನಡದ ಬಗ್ಗೆ ಪಾಠ ಮಾಡಲು ಸಹಾಯವಾಗಲಿದೆ ಎಂದ ಅವರು ಎಲ್ಲರ ಸಹಕಾರವಿದ್ದಾಗ ಮಾತ್ರ ಸಾಹಿತ್ಯ ಪರಿಷತ್ತು ಯಾವುದೇ ಅಡೆ ತಡೆಗಳಿಲ್ಲದೆ ಕೆಲಸ ಮಾಡಲು ಸಾದ್ಯವಾಗಲಿದೆ. ಹೀಗಾಗಿ ಎಲ್ಲರ ಸಹಕಾರದಿಂದ ಕಸಾಪ ಚಟುವಟಿಕೆಗಳನ್ನು ಮಾಡೋಣ ಎಂದರು.
ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ ಮಾತನಾಡುತ್ತಾ ರಾಜ್ಯದ ಜನರಿಗೆ ತತ್ವಪದ ಪರಿಚಯಿಸಿದ ಪದಕಾರ ಕಡಕೋಳ ಮಡಿವಾಳಪ್ಪನವರ ಕರ್ಮಭೂಮಿಯವರು ನಾವು. ಆದರೆ ಅವರನ್ನು ಸ್ಮರಿಸುವ, ಮತ್ತು ಅವರ ಸಾಹಿತ್ಯವನ್ನು ಉಳಿಸುವ ಕೆಲಸ ಮಾಡುವಲ್ಲಿ ನಾವು ವಿಫಲವಾಗಿದ್ದೇವೆ. ಸರ್ಕಾರ ಮಡಿವಾಳಪ್ಪನವರ ಸಾಹಿತ್ಯವನ್ನು ಡಿಜಿಟಲಿಕರಣಗೊಳಿಸಬೇಕು ಮತ್ತು ಅವರ ಸಾಹಿತ್ಯವನ್ನು ರಾಜ್ಯದ ಮೂಲೆ ಮೂಲೆಗೆ ತಲುಪವಂತೆ ಕ್ರಮ ಕೈಗೊಳ್ಳಬೇಕು ಎಂದರು ಅಲ್ಲದೆ ಕನ್ನಡ ಪರ, ಪ್ರಗತಿಪರ, ದಲಿತ ಸೇರಿದಂತೆ ಎಲ್ಲಾ ಸಂಘಟನೆಗಳಲ್ಲೂ ಭಿನ್ನಾಭಿಪ್ರಾಯಗಳು ಇರುವುದು ಸಹಜ ಆದರೆ ನಾಡು ನುಡಿಯ ವಿಷಯ ಬಂದಾಗ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕಸಾಪ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಯುವ, ಹಿರಿಯ ಸಾಹಿತಿಗಳು, ಪೌರ ಕಾರ್ಮಿಕರು, ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ್, ಬಿಇಒ ಎಚ್.ಎಸ್ ದೇಶಮುಖ, ಮುಖಂಡರಾದ ಬಸವರಾಜ ಚಾಂದಕವಟೆ, ಸದಾಶಿವ ಮೇತ್ರಿ, ಡಿ.ಎಂ ನದಾಫ, ಅಬ್ಬಾಸಲಿ ನದಾಫ, ಮಳೇಂದ್ರ ಡಾಂಗೆ, ಮಕ್ಸೂದ್ ಜಾಗಿರದಾರ, ಪರಮಾನಂದ ಸರಸಂಬಿ, ಯಲ್ಲಪ್ಪ ದೊಡ್ಮನಿ, ಮಹೇಶ ಆಲೆಗಾಂವ, ಶ್ರೀಮಂತ ಬಿರಾದಾರ, ಬಸಣ್ಣ ಗುಣಾರಿ, ಶರಣು ಅವಟೆ, ರಾಜು ಆರೇಕರ, ಶಿವಶರಣ ಬಡದಾಳ, ಗೋಪಾಲ ಹಳ್ಯಾಳ, ಶ್ರೀಶೈಲ್ ಮ್ಯಾಳೇಸಿ, ಅಶೋಕ ಕಲ್ಲೂರ, ಸಿದ್ದಯ್ಯ ಹಿರೇಮಠ, ಜಮೀಲ ಗೌಂಡಿ, ಬಸಪ್ಪ ಜಾಬಾ, ಸೂರ್ಯಕಾಂತ ಬಜಂತ್ರಿ, ಅರ್ಚನಾ ಜೈನ್, ಚಂದ್ರಶೇಖರ ಹೊಸೂರಕರ, ಭಾಗ್ಯಶಿಲ್ಪ ಅಲೆಗಾಂವ, ಧೂಳಪ್ಪ ಈಶ್ವರಗೊಂಡ, ಭೀಮಾಶಂಕರ ಮೇಳಕುಂದಿ, ಮಹಾದೇವ ವಿಶ್ವಕರ್ಮ, ಶಂಕರ ಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.