ಲಿಂಗಸೂಗೂರು: ರೈತ ವಿರೋಧಿ, ಕೃಷಿ ಕಾಯಿದೆಗಳ ರದ್ದತಿಗೆ ಅಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಎರಡು ದಿನಗಳ ಕಾಲ ಧರಣಿ ನೆಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹೆಚ್. ಆರ್. ಬಸವರಾಜಪ್ಪ ಬಣ) ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ್ ರಾಂಪುರ್ ಹೇಳಿದರು.
ಇನ್ನು ಈ ಧರಣಿ ಕಾರ್ಯಕ್ರಮಕ್ಕೆ ಎಲ್ಲಾ ಕಾರ್ಮಿಕ ಸಂಘಟನೆ, ಸಂಘ ಸಂಸ್ಥೆಗಳು ಭಾಗವಹಿಸುತ್ತಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಪೊರೇಟ್ ಪರ ನವ ಉದಾರವಾದಿ ನೀತಿಗಳು ದೇಶದಲ್ಲಿ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ, ಸಾಮಾನ್ಯ ಜನರ ಮೇಲೆ ಜಿಎಸ್‌ಟಿ ವಿಧಿಸಿದೆ.
ಈಗಾಗಲೇ ಮಳೆ ಕೈಕೊಟ್ಟಿದ್ದರಿಂದ ರಾಜ್ಯ ಸಂಪೂರ್ಣ ಬರಗಾಲವೆಂದು ಘೋಷಣೆಯಾಗಿದ್ದರಿಂದ ತತಕ್ಷಣದಿಂದ ರೈತರಿಗೆ ಒಂದು ಎಕರೆಗೆ 20, ಸಾವಿರ ಪರಿಹಾರ ಘೋಷಿಸಬೇಕು. ರಾಜ್ಯದ 214 ತಾಲೂಕುಗಳನ್ನು ಬರಗಾಲ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ರೈತನಿಗೆ ಬರಗಾಲ ಪರಿಹಾರ ಧನ ವಿತರಿಸುವ ಪ್ರಕ್ರಿಯ ಇದುವರೆಗೂ ಪ್ರಾರಂಭಿಸಿಲ್ಲ.
ಇತ್ತೀಚಿಗೆ ಸರಕಾರ ಆದೇಶ ಮಾಡಿರುವ ರೈತರ ಐಪಿ ಶಟ್ಟುಗಳಿಗೆ ಮೂಲಸೌಕರ್ಯವನ್ನು ರೈತರೇ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಹಾಗೂ ವಿದ್ಯುತ್ ಖಾಸಗಿಕರಣ ಮಾಡದೆ ವಿಧಾನಸಭೆಯಲ್ಲಿ ನಿರ್ಣಯ ಮಾಡಿ, ಕೇಂದ್ರಕ್ಕೆ ಕಳುಹಿಸಿ ಕೊಡಬೇಕು. ಐಪಿ ಶಟ್ಟುಗಳಿಗೆ ರೈತರೇ ಸ್ವಯಂ ವೆಚ್ಚದಲ್ಲಿ ಕಂಬ, ತಂತಿ, ಮತ್ತು ಟಿ ಸಿ ಗಳನ್ನು ಹಾಕಿಸಿಕೊಳ್ಳಬೇಕೆಂಬ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.