ಭೀಮಾನದಿಯ ತೀರದ ರೈತರು ಆಕ್ರೋಶ.. ಕಾರಣ ಗೊತ್ತಾ..!
ಚಡಚಣ : ಭೀಮಾ ನದಿ ತೀರದ ಹಳ್ಳಿಗಳ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ, ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಜಿಲ್ಲಾಡಳಿತದ ಕ್ರಮದಿಂದ ಆಕ್ರೋಶಗೊಂಡ ರೈತರು ಶನಿವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸ್ ವಾಹನಕ್ಕೂ ಅಡ್ಡ ಮಲಗಿ ಆಕ್ರೋಶ ಹೊರ ಹಾಕಿದ್ದಾರೆ. ತತ್ ಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹೆಸ್ಕಾಂ ಕಛೇರಿ ಎದುರು ಭೀಮಾನದಿ ತೀರದ ರೈತರು ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ನದಿ ತೀರದಲ್ಲಿ 144 ನಿಷೇದಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಜಗುಸಾಹುಕಾರ್ ಬೈರಗೊಂಡ ಮಾತಾನಾಡಿದ ಅವರು, ಸಂಪೂರ್ಣ ಮತ್ತು ಸತತ ಬರ ಪರಿಸ್ಥಿತಿ ಇಲ್ಲಿ ರೈತರು ಅನುಭವಿಸುತ್ತಿದ್ದಾರೆ. ಅದರಲ್ಲಿರುವ ಅಲ್ಪ ಸ್ವಲ್ಪ ನೀರು ಉಪಯೋಗಬಾರಂತಾಗಿದೆ. ಪದೆ ಪದೆ ವಿದ್ಯುತ್ ಅಸಮರ್ಪಕ ನೀಡಿ ರೈತರಿಗೆ ಹಿಂಸೆ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಅಧಿಕಾರಿಗಳ ಮತ್ತು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಗಡಿಭಾಗದ ಮಹಾರಾಷ್ಟ್ರದಲ್ಲಿ ರೈತರಿಗೆ ಕನಿಷ್ಠ ಎಂಟು ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕೇವಲ ಎರಡು ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆಯನ್ನ ಬಗೆಹರಿಸಬೇಕೆಂದು ಚಡಚಣ ವಲಯದ ಹೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಈಗಾಗಲೇ ಬೆಳೆ ಒಣಗುತ್ತಿದ್ದು, ಜನ ಜಾನುವಾರುಗಳಿಗೆ ಕುಡಿಯಲು ಸಹ ನೀರು ಲಭ್ಯವಾಗುತ್ತಿಲ್ಲ. ಹೊಲ ತೋಟಗಳ ಜೊತೆಗೂ ಮನೆ ಬಳಕೆಗೂ ವಿದ್ಯುತ್ ಪೂರೈಕೆ ಇಲ್ಲದಂತಾಗಿದ್ದು ಜನತೆ ಅದರಲ್ಲೂ ರೈತಾಪಿ ವರ್ಗ ಕಂಗಾಲಾಗುವಂತಾಗಿದೆ ಎಂದು ಅಧಿಕಾರಿಗಳಿಗೆ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಅಳಲನ್ನು, ಒಡಲೊಳಗಿನ ಆಕ್ರೋಶವನ್ನ ತೋಡಿಕೊಂಡರು. ಇನ್ನಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆ ಬರದ ತೀರ್ವತೆ ಅರಿತು ನದಿಗೆ ನೀರು ಬಿಡಿಸುವಂತೆ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಇಲ್ಲವಾದಲ್ಲಿ ರೈತರು ಆತ್ಮಹತ್ಯೆಗೆ ಮುಂದಾಗುವಂತಹ ಪರಿಸ್ಥಿತಿ ಅನಿವಾರ್ಯವಾಗಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆಯನ್ನ ನೀಡಿದರು.