ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜಿ.ಪಂ ಸಿಇಓ ರಿಷಿ ಆನಂದ
ವಿಜಯಪುರ ಜೂ.05 : ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಜೊತೆಗೆÀ ಹೊಣೆಯಾಗಿದೆ. ಪರಿಸರ ನಾಶವನ್ನು ತಡೆಗಟ್ಟಬೇಕಾಗಿದೆ. ಇದಕ್ಕೆ ಪೂರಕವಾಗಿ ನಾವು ದಿನನಿತ್ಯ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು. ಜೊತೆಗೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಪ್ರಕೃತಿ ಮಾತೆಯನ್ನು ಸ್ವಚ್ಛಂದವಾಗಿ ಇಡಬೇಕು. ಪ್ರಕೃತಿಯು ನಮಗೆ ದಿವ್ಯ ಕೊಡುಗೆ ಕೊಟ್ಟಿದೆ. ಮುಂದಿನ ಪೀಳಿಗೆಗಾಗಿ ಈ ಅಮೂಲ್ಯ ಕೊಡುಗೆಗಳನ್ನು ಸಂರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಪರಿಸರವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪ್ರಾಮುಖ್ಯತೆಯನ್ನು ವಹಿಸಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಹೇಳಿದರು.
ಅವರು, ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ತಾಯಿ ಸ್ವರೂಪಿ ಅದು ನಮ್ಮನ್ನು ರಕ್ಷಿಸುತ್ತದೆ. ಪ್ರಕೃತಿಯು ನಮಗೆ ಉಚಿತವಾಗಿ ಗಾಳಿ, ಬೆಳಕು, ನೀರು, ಆಹಾರ ಒದಗಿಸಿ ಸಲುಹುತ್ತದೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯ ಮೂಲಕ ಅರಣ್ಯೀಕರಣ ಯೋಜನೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಪರಿಸರ ಸಂರಕ್ಷಣೆ ಬಹಳ ಪ್ರಮುಖವಾದದ್ದು ಮತ್ತು ಅದು ನಮ್ಮೆಲ್ಲರ ಜವಾಬ್ದಾರಿಯೂ ಸಹ ಆಗಿದೆ. ಜಗತ್ತಿನಲ್ಲಿ ಪ್ರಸ್ತುತ ಬದಲಾವಣೆಯ ಆಧುನೀಕರಣದಿಂದ ಪರಿಸರ ನಶಿಸದಂತೆ ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಾನವ ಸಂಕುಲದ ಬದುಕುಳಿಯುವಿಕೆಗೆ ಅವಶ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಪರಿಸರ ಒದಗಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಪರಿಸರವನ್ನು ರಕ್ಷಿಸುವ ಕಾಯಕದಲ್ಲಿ ಇಂದಿನಿAದಲೇ ತೊಡಗಬೇಕು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯನಾಶ ಮತ್ತು ಜೀವವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ, ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಯೋಗಕ್ಷೇಮದಲ್ಲಿ ನಾವು ಇರುವ ಪರಿಸರವು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಮತ್ತು ಎಲ್ಲವನ್ನೂ ಸಂರಕ್ಷಿಸುವುದು ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಮೂಲಕ ವಿವಿಧ ಕಾರಣಗಳಿಗಾಗಿ ಕಾಡುಗಳನ್ನು ನಾಶ ಮಾಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾವೂ ಸಹ ಹಲವಾರು ವರ್ಷಗಳಿಂದ ಇದೇ ಹಾದಿಯಲ್ಲಿ ಸಾಗುತ್ತಿದ್ದೇವೆ. ಈ ದೇಶದ ನಾಗರಿಕರಾಗಿ ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಪ್ರಕೃತಿ ಮಹತ್ವದ ಕುರಿತು ಅರ್ಥೈಸಿಕೊಂಡು ಎಲ್ಲ ರೀತಿಯಲ್ಲಿ ಅದನ್ನು ರಕ್ಷಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಅವಶ್ಯಕ. ನಾವು ಪರಿಸರದ ಬಗ್ಗೆ ಜಾಗೃತರಾಗಿದ್ದರೆ ಮಾತ್ರ ಸಾಲದು ಪ್ರಕೃತಿ ನಮಗೆ ಒದಗಿಸುತ್ತಿರುವ ಎಲ್ಲ ಅವಶ್ಯಕತೆಗಳಿಗೂ ನಾವು ಕಾಳಜಿಯನ್ನು ನೀಡಬೇಕಾಗಿದೆ. ಇದರ ಎಲ್ಲರಿಗೂ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಪ್ರಕೃತಿ ಸಂಪನ್ಮೂಲವನ್ನು ನಮಗೆ ಅವಶ್ಯಕತೆ ಇದ್ದಷ್ಟು ಮಾತ್ರ ಉಪಯೋಗಿಸೋಣ, ಅವಶ್ಯಕತೆಗಿಂತ ಹೆಚ್ಚು ಉಪಯೋಗ ಮಾಡದೇ ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಸಿಲಿನ ತಾಪಮಾನ ಇರುವುದರಿಂದ ಸಸಿಗಳನ್ನು ನೆಡುವುದು ಹಾಗೂ ಜಲ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಜಲಸಂರಕ್ಷಣೆಗೆ ಅತ್ಯಂತ ಸೂಕ್ತ ವಿಧಾನ ಮಳೆನೀರು ಕೊಯ್ಲು ಈ ವಿಧಾನವನ್ನು ನಾವು ಅಳವಡಿಸಿಕೊಂಡು ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.
ಅಕಾಡೆಮಿ ಅಧ್ಯಕ್ಷರಿಂದ ಪರಿಸರ ಜಾಗೃತಿ: ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಜಿಲ್ಲಾ ಪಂಚಾಯತಿಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಈ ಸುಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿ, ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಸಹಾಯಕ ಕಾರ್ಯದರ್ಶಿಗಳಾದ ಅನುಸೂಯಾ ಚಲವಾದಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾದ ಎ. ಬಿ ಅಲ್ಲಾಪೂರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಿ. ಎಸ್. ಕುಂಬಾರ, ಸಹಾಯಕ ಯೋಜನಾಧಿಕಾರಿಗಳಾದ ಅರುಣಕುಮಾರ ದಳವಾಯಿ ಹಾಗೂ ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಯವರು ಹಾಗೂ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.