ಅಫಜಲಪುರ: ಕಾನೂನು ಕೇವಲ ವಕೀಲರು, ಪೊಲೀಸ್‌ರಿಗೆ ಗೊತ್ತಿರಬೇಕಾದುದ್ದಲ್ಲ, ದೇಶದ ಜವಾಬ್ದಾರಿಯುತ ಎಲ್ಲಾ ಪ್ರಜೆಗಳಿಗೆ ಕಾನೂನಿನ ಮಾಹಿತಿ ಇರಬೇಕು ಎಂದು ಸಿವಿಲ್ ನ್ಯಾಯಾಧೀಶ ಅಶೋಕ ಟಿ ಹೇಳಿದರು. ಅವರು ಮಲ್ಲಾಬಾದ ಗ್ರಾಮದ ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಫಜಲಪುರ, ತಾಲೂಕಾ ನ್ಯಾಯವಾದಿಗಳ ಸಂಘ ಅಫಜಲಪುರ ಮತ್ತು ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಮಲ್ಲಾಬಾದ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಬಹಳಷ್ಟು ಜನರಿಗೆ ಸರಿಯಾಗಿ ಕಾನೂನಿನ ಮಾಹಿತಿ ಇರುವುದಿಲ್ಲ. ಇದು ನಿಜಕ್ಕೂ ಸರಿಯಾದ ಬೆಳವಣಿಗೆಯಲ್ಲ, ಅಲ್ಲದೆ ವಿದ್ಯಾರ್ಥಿಗಳು ತಮ್ಮ ಓದುವ ವಯಸ್ಸಿನಲ್ಲಿ ಸಿನಿಮಾ, ಹಾಡು, ಮೊಬೈಲ್‌ಗಳಿಂದ ಪ್ರೇರಣೆಗೊಂಡು ಪ್ರೀತಿ, ಪ್ರಣಯ ಅಂತೆಲ್ಲ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಆದರೆ ಅಸಲಿಗೆ ಅವರು ತಮ್ಮ ಭವಿಷ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಬೇರಾವ ಕಡೆಗೂ ಮನಸ್ಸನ್ನು ಹರಿಬಿಡದೆ ಶೃದ್ದೆಯಿಂದ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮ ಪಾಲಕರು, ನೀವು ಕಲಿತ ಶಾಲೆ, ಕಾಲೇಜುಗಳಿಗೆ ಹೆಮ್ಮೆ ತರುವಂತ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಹಿರಿಯ ವಕೀಲರಾದ ಎಸ್.ಜಿ ಹುಲ್ಲೂರ, ಕೆ.ಜಿ ಪೂಜಾರಿ ಮಾತನಾಡುತ್ತಾ ಜನನ ಮರಣ ನೊಂದಣಿ, ಬಾಲ್ಯ ವಿವಾಹ, ಬಾಲ ಕಾಂಇðಕ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರಾಚಾರ್ಯ ಡಾ. ಸಂಗಣ್ಣ ಎಂ ಸಿಂಗೆ ಆನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದವರು ಗ್ರಾಮೀಣ ಭಾಗಗಳಿಗೆ ಬಂದು ಜನರಿಗೆ ಕಾನೂನಿನ ಮಾಹಿತಿಯನ್ನು ಉಚಿತವಾಗಿ ನೀಡುವ ಮೂಲಕ ಜನಸಾಮಾನ್ಯರಲ್ಲಿ ಕಾನೂನಿನ ಪ್ರಜ್ಞೆ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಿ ಕಾನೂನಿನ ಅರಿವು ಮೂಡಿಸಿಕೊಂಡು ಪ್ರಜ್ಞಾವಂತ ನಾಗರಿಕರಾಗಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ಮಲ್ಲಣಗೌಡ ಪಾಟೀಲ್, ಸುರೇಶ ಅವಟೆ, ಸಿದ್ರಾಮಯ್ಯ ಹಿರೇಮಠ, ಗಡಿನಾಡು ಹೋರಾಟಗಾರ ಸದ್ದಾಂ ಹುಸೇನ್ ನಾಕೇದಾರ, ಸಂಸ್ಥೆಯ ಸಿಬ್ಬಂದಿಗಳಾದ ಯಲ್ಲಾಲಿಂಗ ಪೂಜಾರಿ, ನಿಂಗಣ್ಣ ಪೂಜಾರಿ, ಸುಧೀರಕುಮಾರ ಬಿಂಜಗೇರಿ, ನಬಿ ದೇವರಮನಿ, ಶಾಹಿನ್ ದೇವರಮನಿ, ಮಲ್ಲಯ್ಯ ಮಠ ಇದ್ದರು. ಯಲ್ಲಾಲಿಂಗ ಮೈಲಾರಿ ನಿರೂಪಿಸಿದರು, ಗುರು ಮಗಿ ವಂದಿಸಿದರು.



















