ಬೆಂಗಳೂರು: ಬೆಸ್ಕಾಂ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟಿಸಿ ತಂದೆ ಸಾವನ್ನಪ್ಪಿದ್ದು, ಮಗಳು ಜೀವನ್ಮರಣ ಹೋರಾಟದಲ್ಲಿದ್ದಾಳೆ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬ್ರಿಡ್ಜ್ ಸಮೀಪ ಈ ಘಟನೆ ನಡೆದಿದ್ದು, ಶಿವರಾಜ್ ಮೃತಪಟ್ಟ ತಂದೆ. ಮಗಳು ಚೈತನ್ಯಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಚೈತನ್ಯಾಗೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್‌ನಲ್ಲಿ ನಿಶ್ಚಿತಾರ್ಥ ನಡೆಯಬೇಕಿತ್ತು. ತನ್ನ ತಂದೆ ಜತೆ ಬಟ್ಟೆ ಖರೀದಿ ಮಾಡಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಮಂಗನಹಳ್ಳಿ ಬ್ರಿಡ್ಜ್ ಬಳಿ ಸಾಗುವಾಗ ಇದ್ದಕ್ಕಿದ್ದಂತೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟಿಸಿದೆ. ಸ್ಫೋಟದ ರಭಸಕ್ಕೆ ಅದರಲ್ಲಿದ್ದ ಆಯಿಲ್ ಬೈಕ್‌ನಲ್ಲಿ ಹೋಗುತ್ತಿದ್ದ ಶಿವರಾಜ್ ಮತ್ತು ಚೈತನ್ಯಾ ಅವರ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ.
ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಜ್ಞಾನ ಭಾರತಿ ಪೊಲೀಸರು ಬೆಸ್ಕಾಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.