ಬಹುಮುಖ ಪ್ರತಿಭೆಯ ನಿವೃತ್ತ ಶಿಕ್ಷಕರಿಗೆ ಶಿಷ್ಯಬಳಗದ ಗೌರವ: ಏ.೨೭ರಂದು ನೆರಬೆಂಚಿಯಲ್ಲಿ ಸಮಾರಂಭ:
ಶಿಕ್ಷಣ ಶಿಲ್ಪಿ ಅಭಿನಂದನ ಗ್ರಂಥ ಲೋಕಾರ್ಪಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿಯ ಬಹುಮುಖ ವ್ಯಕ್ತಿತ್ವದ ನಿವೃತ್ತ ಶಿಕ್ಷಕ, ವಾಸ್ತು ತಜ್ಞ, ಸ್ಥಳೀಯ ಎಚ್ಚರೇಶ್ವರ ದೇವಸ್ಥಾನದ ಪ್ರಪ್ರಥಮ ಕಬ್ಬಿಣದ ತೇರು ನಿರ್ಮಾಣದ ಪ್ರೋತ್ಸಾಹಕ, ಶರಣ ಸಂಸ್ಕೃತಿಯ ಪರಿಪಾಲಕ ಎನ್.ಎಸ್.ಪೋಲೇಶಿ ಅವರ ಕುರಿತು ಸಂಪಾದಿಸಲಾದ ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭವನ್ನು ಸಾರ್ಥಕ ರೂಪದಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಗ್ರಂಥ ಸಂಪಾದಕ, ಎಂಜಿವಿಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಪ್ರಕಾಶ ನರಗುಂದ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, ಅಪಾರ ಶಿಷ್ಯಬಳಗ ಹೊಂದಿರುವ ಪೋಲೇಶಿ ಗುರುಗಳ ಬಗ್ಗೆ ನಾಡಿನ ಹೆಸರಾಂತ ಧರ್ಮದರ್ಶಿಗಳು, ಮಠಾಧೀಶರು, ಸ್ವಾಮೀಜಿಗಳು, ಗಣ್ಯರು, ಸಾಹಿತಿಗಳು, ಬರಹಗಾರರು, ಉನ್ನತ ಹುದ್ದೆಗಳಲ್ಲಿರುವ ಅವರ ಶಿಷ್ಯಂದಿರ ಬರಹಗಳನ್ನು ಗ್ರಂಥದಲ್ಲಿ ಸಂಗ್ರಹಿಸಿಡಲಾಗಿದೆ ಎಂದರು. ಏ.೨೭ರಂದು ಬೆಳಿಗ್ಗೆ ೧೦-೩೦ ಗಂಟೆಗೆ ನೆರಬೆಂಚಿಯ ಎಚ್ಚರಸ್ವಾಮಿ ದೇವಸ್ಥಾನ ಆವರಣದಲ್ಲಿ ಗ್ರಂಥ ಲೋಕಾರ್ಪಣೆ, ೨೦೮ನೇ ಶಿವಾನುಭವ ಗೋಷ್ಠಿ ನಡೆಯಲಿದೆ.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಇಟಗಿ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಡಾ|ಗುರುಶಾಂತ ಶಿವಾಚಾರ್ಯರು ದಿವ್ಯಸಾನಿಧ್ಯ, ಹಿರೇಮುರಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ ಅಧ್ಯಕ್ಷತೆ ವಹಿಸುವರು. ಎಸ್‌ಜಿವಿಸಿ ವಿದ್ಯಾಪ್ರಸಾರಕ ವಿಶ್ವಸ್ಥನಿಧಿಯ ಕಾರ್ಯದರ್ಶಿಗಳಾದ ಅಶೋಕ ತಡಸದ ಉದ್ಘಾಟಿಸುವರು. ಧಾರವಾಡದ ಹಿರಿಯ ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ|ಸಂಗಮನಾಥ ಲೋಕಾಪುರ ಅವರು ಕೃತಿ ಪರಿಚಯ ಮಾಡಿಕೊಡುವರು. ಆಲೂರಿನ ಗಣ್ಯರಾದ ಗುರುಲಿಂಗಪ್ಪಗೌಡ ಹಿರೇಗೌಡರ, ನಾಲತವಾಡ ಶರಣ ವೀರೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಸ್.ಎನ್.ಕಂಗಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಆಲೂರಿನ ಶರಣಮ್ಮ ಹಿರೇಗೌಡರ ಉಪಸ್ಥಿತರಿರುವರು. ಬೂದಿಹಾಳದ ಗಂಗಾಯಪೀಠದ ಸ್ವಾಮೀಜಿ, ಹಿರೇಮುರಾಳದ ಶಿವಣ್ಣಶರಣರು ಗುಡಗುಂಟಿ, ಅಗಸಬಾಳದ ಬಸನಗೌಡ ಪಾಟೀಲ, ಚಿರ್ಚನಕಲ್ಲನ ಡಾ|ರಾಜಶೇಖರ ಹತ್ತರಸಂಗ, ನಿವೃತ್ತ ಪ್ರಾಚಾರ್ಯ ಬಿ.ಪಿ.ಪಾಟೀಲ, ನಿವೃತ್ತ ಮುಖ್ಯಾಧ್ಯಾಪಕ ಜಿ.ಎಚ್.ಪಾಟೀಲ, ಎಂ.ಎಸ್.ಬಿರಾದಾರ, ವಾಗ್ಮಿ ಪರಶುರಾಮ ಚೌಡಕೇರ ಅನುಭವ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು. ಈ ಭಾಗದಲ್ಲಿ ಇದೊಂದು ವಿನೂತನ ಸಮಾರಂಭವಾಗಿರಲಿದ್ದು ಸಾರ್ವಜನಿಕರು, ಪೋಲೇಶಿ ಅವರ ಶಿಷ್ಯಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಡಾ ಪ್ರಕಾಶ ಮನವಿ ಮಾಡಿದರು.