ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಡಾ.ಮಹಾಂತರು-ಸಂತೋಷ ಬಂಡೆ
ಇಂಡಿ: ಜಾತಿ, ಮತ, ಪಂಗಡ, ಧರ್ಮ, ಭಾಷೆ, ದೇಶವೆನ್ನದೇ 42 ವರ್ಷಗಳ ಕಾಲ ಇಡೀ ದೇಶದಲ್ಲಿ ಅಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ತಮ್ಮ ‘ಮಹಾಂತ ಜೋಳಿಗೆ’ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ‘ವ್ಯಸನ ಮುಕ್ತ ದಿನಾಚರಣೆ’ ನಿಮಿತ್ತ ಹಮ್ಮಿಕೊಂಡ ‘ದುಶ್ಚಟಗಳ ಪರಿಣಾಮ-ಎಲ್ಲರಿಗೂ ಅರಿವು’-ಚರ್ಚಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದರು.
ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿದ ಶ್ರೇಷ್ಠ ಸಂತರಿವರು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ಬೀರುವ ಪರಿಣಾಮದ ಕುರಿತು ಜನಜಾಗೃತಿ ಮೂಡಿಸಿದ ಶಿವಯೋಗಿಗಳ ಕಳಕಳಿ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಟಿಜಿಟಿ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ‘ವ್ಯಸನ ಮುಕ್ತ ಸಮಾಜ’ ನಿರ್ಮಾಣಕ್ಕೆ 1975ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಅಧ್ಯಕ್ಷತೆ ವಹಿಸಿ ಮಾತನಾಡಿ,
ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು, ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶ ಅವರದಾಗಿತ್ತು. ದುಶ್ಚಟಗಳ ಪರಿಣಾಮದ ಅರಿವನ್ನು ಇಂದು ನಾವೆಲ್ಲರೂ ಹೊಂದಬೇಕು ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ, ತೈಸಿನ್ ನದಾಫ್ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.