ಜಿಲ್ಲೆಯಲ್ಲಿ ನಕಲಿ ವೈದ್ಯರ ಕಡಿವಾಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಸೂಚನೆ
ವಿಜಯಪುರ, ಫೆ.02 :ಜಿಲ್ಲೆಯಲ್ಲಿ ನಕಲಿ ವೈದ್ಯರ ಕುರಿತು ದೂರುಗಳಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ವೈದ್ಯರ ಕಡಿವಾಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೆ.ಪಿ.ಎಮ್.ಇ ಹಾಗೂ ಪಿ.ಸಿ ಪಿ.ಎನ್.ಡಿ.ಟಿಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾಲೂಕಾ ಮಟ್ಟದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಲು ನಿರ್ಣಯಿಸಿ, ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು, ತಾಲೂಕಿನ ಪೊಲೀಸ್ ಇಲಾಖೆಯ ಪಿ.ಎಸ್.ಐ-ಸಿ.ಪಿ.ಐ, ತಾಲೂಕಿನ ಅಯುಷ್ ಅಧಿಕಾರಿ, ತಾಲೂಕಾ ಆರೋಗ್ಯಾಧಿಕಾರಿ, ತಾಲೂಕಿನ ಸಿ.ಡಿ.ಪಿ.ಓ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ನಕಲಿ ವೈದ್ಯರ ಕಡಿವಾಣಕ್ಕೆ ಸಮಿತಿ ರಚಿಸಲಾಯಿತು.
ವಿಜಯಪುರ ತಾಲೂಕಿನಲ್ಲಿ 707 ಖಾಸಗಿ ಆರೋಗ್ಯ ಸಂಸ್ಥೆಗಳು ಜಿಲ್ಲಾ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಆಗಿರುತ್ತವೆ, ಬ.ಬಾಗೇವಾಡಿ ತಾಲೂಕಿನಲ್ಲಿ 102, ಮುದ್ದೇಬಿಹಾಳ ತಾಲೂಕಿನಲ್ಲಿ 111, ಇಂಡಿ ತಾಲೂಕಿನಲ್ಲಿ 148, ಸಿಂದಗಿ ತಾಲೂಕಿನಲ್ಲಿ 145, ಒಟ್ಟು 1213 ಖಾಸಗಿ ಆಸ್ಪತ್ರೆಗಳು ಜಿಲ್ಲಾ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಆಗಿರುತ್ತವೆ. ಅದರಲ್ಲಿ 976 ಖಾಸಗಿ ಆರೋಗ್ಯ ಸಂಸ್ಥೆಗಳು ನಿಯಮಾನುಸಾರ ಬಣ್ಣದ ಫಲಕಗಳನ್ನು ಅಳವಡಿಸಿಕೊಂಡಿವೆ. ಜಿಲ್ಲೆಯ ಶೇ.80.46% ನೋಂದಾಯಿತ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ಚಿಕಿತ್ಸಾ ಪದ್ಧತಿ, ಸಂಸ್ಥೆಯ ಹೆಸರು, ಮಾಲಿಕರು-ವ್ಯವಸ್ಥಾಪಕರ ಹೆಸರು ಹಾಗೂ ಸಂಸ್ಥೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಫಲಕವನ್ನು ಪ್ರದರ್ಶಿಸಿದಂತಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.
ಸಿಂದಗಿ ಹಾಗೂ ಇಂಡಿ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಣ್ಣ ಬಣ್ಣದ ಫಲಕಗಳನ್ನು ಅಳವಡಿಸಲು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.
ಕೆ.ಪಿ.ಎಂ.ಪಿ.ಟಿಯ ಸಿ.ಬಿ.ಎಂ.ಡಬ್ಯೂ.ಟಿ.ಎಫ್ನಲ್ಲಿ ಸುಮಾರು 15 ಖಾಸಗಿ ವೈದ್ಯಕೀಯ ಆರೊಗ್ಯ ಸಂಸ್ಥೆಗಳು ಒಟ್ಟು ರೂ. 25,59,677 ಸೇವಾ ಶುಲ್ಕ ಪಾವತಿಸದೇ ಇರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಈ ಆರೋಗ್ಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ತಪಸಣಾ ಮತ್ತು ಮೇಲ್ವಿಚಾರಣಾ ಸಮಿತಿ ತಂಡದವರು ಪ್ರತಿ ತ್ರೈಮಾಸಿಕದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ನೋಂದಾಯಿತ ಸ್ಕ್ಯಾನಿಂಗ್ ಸೆಂಟರಗಳ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಮತ್ತು ಪಿಸಿ ಪಿಎನ್ಡಿಟಿ ಕಾಯ್ದೆಯ ಅನುಷ್ಠಾನದ ಬಗ್ಗೆ ಪರಿಶೀಲನೆ ಕೈಗೊಂಡು ನ್ಯೂನ್ಯತೆಗಳು ಕಂಡು ಬರುವ ಸ್ಕ್ಯಾನಿಂಗ್ ಸೆಂಟರ್-ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಹಾಗೂ ಎಲ್ಲ ತಾಲೂಕಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಸಲಹಾ ಸಮಿತಿ ಸದಸ್ಯರು, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.


















