ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ಕ್ಕೆ ಸಮಗ್ರ ಹಾಗೂ ನಿಖರ ದತ್ತಾಂಶಗಳನ್ನು ಕಾಲಮಿತಿಯೊಳಗೆ ಒದಗಿಸಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಕರೆ
ವಿಜಯಪುರ, ಜಿಲ್ಲಾ ಮಾನವ ಅಭಿವೃದ್ಧಿ ವರದಿ -2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ -2031 ವರದಿಯ ತಯಾರಿಕೆ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸರಿಯಾದ ಸಮಗ್ರ ಹಾಗೂ ನಿಖರ ದತ್ತಾಂಶ ಮಾಹಿತಿನ್ನು ಕಾಲಮಿತಿಯೊಳಗೆ ಒದಗಿಸುವ ಮೂಲಕ ಉತ್ತಮ ಫಲಿತಾಂಶಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಹೇಳಿದರು.
ಅವರು,ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ -2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ -2031 ವರದಿಯನ್ನು ಸಿದ್ಧಪಡಿಸುವ ಸಂಬಂಧ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವರದಿ ಜಿಲ್ಲೆಯ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಸಮಾನ ಒಳಗೊಳ್ಳುವಿಕೆ ಸಂಬಂಧಿತ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಸುಸ್ಥಿರತೆಯನ್ನು ಆಧಾರವಾಗಿಟ್ಟುಕೊಂಡ ಅಭಿವೃದ್ಧಿ ಕಾರ್ಯತಂತ್ರಗಳನ್ನು ರೂಪಿಸುವ ಉದ್ದೇಶ ಹೊಂದಿದೆ.ಮಾನವ ಅಭಿವೃದ್ಧಿಯ ಪ್ರಮುಖ ಅಂಶಗಳಾದ ಶಿಕ್ಷಣ, ಆರೋಗ್ಯ,ಆದಾಯ, ಜೀವನಮಟ್ಟ, ಲಿಂಗ ಸಮಾನತೆ ಹಾಗೂ ಸಾಮಾಜಿಕ ಭದ್ರತೆಯನ್ನು ಕೇಂದ್ರಿಕರಿಸಿ ಜಿಲ್ಲೆಯ ವಾಸ್ತವಿಕ ಸ್ಥಿತಿಯನ್ನು ಅಂಕಿ-ಅಂಶಗಳ ಮೂಲಕ ಅವಲೋಕಿಸಿ,ಅಭಿವೃದ್ಧಿಯನ್ನು ಸಾಧಿಸುವುದು ವರದಿಯ ಗುರಿಯಾಗಿದೆ.
ಅಧಿಕಾರಿಗಳೂ ನಿರ್ಲಕ್ಷ್ಯ ವಹಿಸದೇ ನಿಖರವಾದ ಮಾಹಿತಿಯುಳ್ಳ ದತ್ತಾಂಶ ಒದಗಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸುವುದು ಮತ್ತು ಅಭಿವೃದ್ಧಿಯ ಫಲಗಳು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ತಲುಪುವಂತೆ ಮಾಡುವುದು. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷ ಚೇತನರ ಹಾಗೂ ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಆದ್ಯತೆ ನೀಡುವುದು ಮುಖ್ಯ ಗುರಿಯಾಗಿದೆ. ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು. ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಸುಧಾರಿಸುವುದು, ಪೌಷ್ಟಿಕಾಂಶ ಕೊರತೆ ನಿವಾರಣೆ,ಕುಡಿಯುವ ನೀರು ಮತ್ತು ಸ್ವಚ್ಛತೆ ವ್ಯವಸ್ಥೆಗಳನ್ನು ಬಲಪಡಿಸುವುದಕ್ಕೂ ಈ ವದಿಯ ಮೂಲಕ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಮಾನವ ಅಭಿವೃದ್ಧಿ ಸ್ಥಿತಿಗತಿಗಳ ಸಮಗ್ರ ಮೌಲ್ಯಮಾಪನ ನಡೆಸಿ, ಶಿಕ್ಷಣ,ಆರೋಗ್ಯ, ಆದಾಯ ಹಾಗೂ ಜೀವನಮಟ್ಟದ ಸೂಚ್ಯಂಕ ಸುಧಾರಿಸುವುದು.
ಗುಣಮಟ್ಟದ ಮತ್ತು ಸಮಾನ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿ ಸಾಕ್ಷರತೆ, ಶಾಲಾ ದಾಖಲಾತಿ ಹಾಗೂ ಕಲಿಕಾ ಫಲಿತಾಂಶಗಳನ್ನು ಸುಧಾರಿಸುವುದು ಈ ಮಾನವ ಅಭಿವೃದ್ಧಿ ಉದ್ದೇಶ ವಾಗಿದೆ.
ಆರೋಗ್ಯ ಸೇವೆಗಳ ಲಭ್ಯತೆ, ಪ್ರವೇಶಾರ್ಹತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿ ಪೌಷ್ಟಿಕಾಂಶ ಕೊರತೆ, ತಾಯಿ-ಮಗು ಮರಣ ಪ್ರಮಾಣ ಮತ್ತು ಸಾಂಕ್ರಾಮಿಕ ರೋಗಗಳನ್ನು ಕಡಿಮೆ ಮಾಡುವುದು.ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಮತೋಲಿತ ಹಾಗೂ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.ಕುಡಿಯುವ ನೀರು, ಸ್ವಚ್ಛತೆ, ವಸತಿ, ಸಾರಿಗೆ ಮತ್ತು ಇತರೆ ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸುವುದು.
ಜಿಲ್ಲಾ ಮಟ್ಟದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಸಮನ್ವಯವನ್ನು ಸಾಧಿಸಿ ಫಲಿತಾಂಶ ಆಧಾರಿತ ಅಭಿವೃದ್ಧಿಯನ್ನು ಖಚಿತಪಡಿಸುವುದು ವರದಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಆದ್ದರಿಂದ 2031ರ ವೇಳೆಗೆ ವ ಜಿಲ್ಲೆಯನ್ನು ಆರ್ಥಿಕ ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯ ಮಾದರಿ ಜಿಲ್ಲೆಯಾಗಿ ರೂಪಿಸುವುದಕ್ಕಾಗಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿಖರ ಹಾಗೂ ಸಮಗ್ರ ಮಾಹಿತಿ ನೀಡುವಂತೆ ಅವರು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ ಎಲ್ಲಾ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿ, ಯಾವುದೇ ಸಮಸ್ಯೆಗಳಿದ್ದರೆ ಈ ಕಾರ್ಯಾಗಾರದಲ್ಲಿ ಪರಿಹಾರ ಹರಿಸಿಕೊಳ್ಳಬೇಕು.
ನೈಸರ್ಗಿಕ ಸಂಪನ್ಮೂಲಗಳ ಸರಿಯಾದ ಬಳಕೆ ಮಾಡುವುದರ ಮೂಲಕ ನಮ್ಮ ಮುಂದಿನ ಪೀಳಿಗೆಗೆ ನೀಡುವ ಮಹತ್ವದ ಉದ್ಧೇಶ ವರದಿ ಒಳಗೊಳ್ಳುತ್ತದೆ. ಅಧಿಕಾರಿಗಳು ಸಮನ್ವಯದಿಂದ ದತ್ತಾಂಶ ವರದಿ ಸಿದ್ಧಪಡಿಸುವಿಕೆಗೆ ಒದಗಿಸುವಂತೆ ಹೇಳಿದರು.
ಈ ವರದಿಯ ಕುರಿತಾಗಿ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಮತ್ತು ಸಾಂಖ್ಯಿಕ ಇಲಾಖೆಯ ಮಾನವ ಅಭಿವೃದ್ಧಿ ವಿಭಾಗದ ಹಿರಿಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳಾದ ಬಸವರಾಜ್ ಎಸ್ ಅವರು ಮಾತನಾಡಿದರು.
ಮತದಾರರ ಪ್ರತಿಜ್ಞಾ ವಿಧಿ ಬೋಧನೆ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾದ ಶಂಕರಗೌಡ ಸೋಮನಾಳ,ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ,ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಚಂದ್ರಕಾಂತ ಕುಂಬಾರ,ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ಅಶೋಕ ಕಘಟಗಿ,ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ,ಮಹಿಳಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಡಿ.ಎಂ.ಮದರಿ,
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ ಸೇರಿದಂತೆ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

















