ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಹೆಚ್ಚುವರಿ ಪ್ರಭಾರಿ ಜಿಲ್ಲಾ ವ್ಯವಸ್ಥಾಪಕರಾಗಿರುವ ಕೃಷಿ ಉತ್ಪನ್ನ ಮಾರಾಟ ಮಂಡಳಿಯ ಸಹಾಯಕ ನಿರ್ದೇಶಕರಾದ ಎಂ.ಭೀಮರಾಯ ಇವರ ಅಕ್ರಮ ಮತ್ತು ಅಧಿಕಾರ ದುರುಪಯೋಗ ಹಾಗೂ ಭೂ ಮಾಲೀಕರಿಗೆ ವಂಚನೆ ಪ್ರಕರಣ ಕುರಿತು ತನಿಖೆ ನಡೆಸಿ, ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದಲಿತಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಆಗ್ರಹಿಸಿದೆ. ಭೂ ಒಡೆತನ ಯೋಜನೆಯಡಿ ಮಾನ್ವಿ ಮತ್ತು ಸಿರವಾರ ತಾಲೂಕಿನ ಕಲ್ಲೂರು, ಮಾಡಗಿರಿ, ಹರವಿ, ಜಕ್ಕಲದಿನ್ನಿ, ನೀರಮಾನ್ವಿ, ಕೆ.ಗುಡದಿನ್ನಿ ಸೇರಿದಂತೆ ಹಲವಾರು ಗ್ರಾಮಗಳ ಭೂಮಾಲೀಕರ ಜಮೀನು ವೀಕ್ಷಿಸಿ, ತರಾತುರಿಯಲ್ಲಿ ಹೆಚ್ಚಿನ ಬೆಲೆ ನಿಗದಿ ಪಡಿಸುತ್ತೇನೆ. ನಾನು ಕೇಳಿದಷ್ಟು ಹಣ ನೀಡುವಂತೆ ಲಂಚದ ಒಪ್ಪಂದ ಮಾಡಿಕೊಂಡ ಪ್ರಕರಣಗಳಿವೆ. ಇಲ್ಲಿವರೆಗೂ ಸಾವಿರದಿಂದ ಹದಿನೈದು ನೂರು ಎಕರೆಗೆ ಪರಿಶೀಲಿಸಿ, ವೈಯಕ್ತಿಕವಾಗಿ ತಮ್ಮನ ಜೊತೆ ಮಾಮಂದಿರಾದ ಲವಕುಶ ಎಂಬ ಕುಟುಂಬದ ಮಧ್ಯವರ್ತಿಗಳನ್ನು ಸೇರಿಸಿಕೊಂಡು ೨೫೦ ಎಕರೆ ಜಮೀನು ಪರಿಶೀಲಿಸಿ, ೬೦ ಭೂ ಮಾಲೀಕರಿಂದ ಎಕರೆಗೆ ಒಂದುವರೆ ಲಕ್ಷ ರೂ.ದಂತೆ ಒಟ್ಟು ೩.೭೮ ಕೋಟಿ ಹಣ ಪಡೆದಿದ್ದಾರೆಂದು ಆರೋಪಿಸಲಾಗಿದೆ. ಸೆಪ್ಟೆಂಬರ್ ೨೦೨೧ ರಿಂದ ೨೭ ಡಿಸೆಂಬರ್ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಫಲಾನುಭವಿಗಳಿಂದ ಹಾಗೂ ಭೂ ಮಾಲೀಕರ ಮಾರಾಟ ಮಾಡಲು ಇಚ್ಛಿಸಿದ ಜಮೀನುಗಳಿಗೆ ಏಕಾಏಕಿ ಫೋಟೋ, ಸಿಡಿ ತೆಗೆದು ಭೂ ಮಾಲೀಕರ ಬೇಡಿಕೆಗೆ ಮೊತ್ತದ ಜೊತೆ ನಗದು ಹಣ ಪಡೆದುಕೊಂಡಿರುತ್ತಾರೆ. ಜಿಲ್ಲಾ ಅನುಷ್ಠಾನ ಸಮಿತಿಯಲ್ಲಿ ತಮ್ಮ ಜಮೀನುಗಳಿಗೆ ಅತಿ ಹೆಚ್ಚು ಮೊತ್ತ ನಿಗದಿ ಪಡಿಸುವುದಾಗಿ ಭೂ ಮಾಲೀಕರಾದ ಫಲಾನುಭವಿಗಳಿಗೆ ಹಾಗೂ ಫಲಾನುಭವಿಗಳಿಗೆ ಘಂಟಗೋಷದಿಂದ ಹೇಳಿಕೊಂಡು ಅಲೆದಾಡುತ್ತಿದ್ದಾರೆ. ಸದರಿ ಭ್ರಷ್ಟ ಅಧಿಕಾರಿಗೆ ರಾಯಚೂರಿನ ಶಾಸಕರೊಬ್ಬರು ಕುಮ್ಮಕ್ಕು ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇವರ ನಿಗಮದ ಫಲಾನುಭವಿಗಳ ಅಭಿವೃದ್ಧಿ ಹೊರತು ಪಡಿಸಿ, ತಮ್ಮದೇಯಾದ ಭೂ ಒಡೆತನ ಯೋಜನೆಯಡಿ ಅನುದಾನ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಪ್ರಸ್ತಾವನೆ ಸಿದ್ಧಪಡಿಸಿ, ಹಗಲು ದರೋಡೆ ನಡೆಸಿದ್ದಾರೆ. ದೇವದುರ್ಗ ತಾಲೂಕಿನ ಅರಕೇರಾ ಹೋಬಳಿಯ ಕ್ಯಾದಿಗೇರಾ ಸೀಮಾಂತರದ ಸರ್ವೇ ನಂ. ೩೪೪/೨ ರಲ್ಲಿ ೩-೧೮ ಗುಂಟೆ, ಸರ್ವೇ ನಂ.೩೪೪/೧ ರಲ್ಲಿ ೪/೧ ಗುಂಟೆ, ೩೪೪/೩ ರಲ್ಲಿ ೪ ಎಕರೆ ಒಟ್ಟು ೧೧-೨೯ ಎಕರೆ ಜಮೀನು ಖುಷ್ಕಿಯಾಗಿದೆ. ಆದರೆ, ಜಿಲ್ಲಾ ವ್ಯವಸ್ಥಾಪಕರು, ತಾಲೂಕು ಅಭಿವೃದ್ಧಿ ಅಧಿಕಾರಿಗಳು ತುಂಗಭದ್ರಾ ಜಲಾಶಯ ಎಂದು ವರದಿ ನೀಡಿದ್ದಾರೆ. ಇನ್ನೊಬ್ಬ ಅಧಿಕಾರಿ ಕೃಷ್ಣ ಭಾಗ್ಯ ಜಲ ನಿಗಮ ಎಂದು ವರದಿ ನೀಡಿದ್ದಾರೆ. ಜಿಲ್ಲಾ ಸಮಿತಿಯಲ್ಲಿ ಕೊಳವೆಬಾವಿಯೆಂದು ನಮೂದಿಸಿದ್ದಾರೆ. ಹೀಗೆ ಸುಳ್ಳು ವರದಿಗಳನ್ನಾಧರಿಸಿ, ಶೇ.೨೦ ರಷ್ಟು ಹಣ ಬಿಡುಗಡೆ ಮಾಡಿರುತ್ತಾರೆ. ಈ ಜಮೀನು ನೀರಾವರಿ ಅಲ್ಲ ಎನ್ನುವುದಕ್ಕೆ ಸಂಬಂಧಿಸಿ ಸ್ವತಃ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದಿಂದ ದೃಢೀಕರಣ ಪತ್ರವೂ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಭಾರಿ ಜಿಲ್ಲಾ ವ್ಯವಸ್ಥಾಪಕರಾದ ಭೀಮರಾಯ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ಇವರನ್ನು ಈ ಸ್ಥಾನದಿಂದ ವರ್ಗಾಯಿಸುವಂತೆ ಆಗ್ರಹಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಈರಣ್ಣ ಭಂಡಾರಿ, ಭಗವಂತ ಏಗನೂರು, ಪರಶುರಾಮ, ಜಿ.ಎಸ್.ನರಸಪ್ಪ, ಮಲ್ಲಪ್ಪ ಜಾಲಹಳ್ಳಿ, ರಾಜೇಶ, ಪರಶುರಾಜ, ರಾಜು ಉಪಸ್ಥಿತರಿದ್ದರು.