ರಾಯಚೂರು – ನಗರದ ತೀನ್ ಕಂದೀಲ್ ವೃತ್ತದಲ್ಲಿನ ನಯಾ ಬಜಾರ ಅಂಚೆ ಕಚೇರಿಯಲ್ಲಿ ಗ್ರಾಹಕರಿಗೆ ಭದ್ರತೆ ಕೊರತೆ ಉಂಟಾಗಿದೆ. ತೀನ್ ಕಂದೀಲ್ ರಸ್ತೆ ಅಗಲೀಕರಣದಲ್ಲಿ ಅಂಚೆ ಕಚೇರಿಯ ಕಾಂಪೌಂಡ್ ಒಡೆದು ಹಾಕಿದ ನಂತರ ಗ್ರಾಹಕರು ವ್ಯವಹರಿಸಲು ಕಷ್ಟವಾಗಿರುತ್ತದೆ ಕಚೇರಿಯ ಕಿಟಕಿಯೊಂದರಲ್ಲೇ ನಿಂತು ವ್ಯವಹಾರ ಮಾಡುವ ಸ್ಥಿತಿ ಬಂದೊಂದಗಿದೆ.
ಸಾವಿರಾರು ಜನರು ಈ ಅಂಚೆ ಕಚೇರಿಯಲ್ಲಿ ತಮ್ಮ ಹಣವನ್ನು ಜಮಾ ಮಾಡಲು ಮತ್ತು ಹಣವನ್ನು ತೆಗೆದುಕೊಳ್ಳಲು ಹಾಗೂ ಸಾರ್ವಜನಿಕರು ರಿಜಿಸ್ಟರ್, ಸ್ಪೀಡ್ ಪೋಸ್ಟ್ ಹೀಗೆ ಎಲ್ಲಾ ವ್ಯವಹಾರಗಳು ಇದೇ ಕಿಡಕಿಯಲ್ಲಿ ನಡೆಯುತ್ತವೆ.
ಕಚೇರಿಯ ಹೊರಗಡೆ ಕಿಟಕಿಯಲ್ಲಿ ನಿಂತ ವೃದ್ಧ ಮಹಿಳೆಯರು ಹಣ ತೆಗೆದುಕೊಳ್ಳುವಾಗ ಯಾರಾದರು ಬಂದು ದೋಚಿಕೊಂಡು ಹೋಗುವ ಸಾಧ್ಯತೆಗಳಿವೆ. ಅಲ್ಲದೇ ಹಣ ತುಂಬುವಾಗಲೂ ಸಹ ಹಣ ಕಳ್ಳತನ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಕಚೇರಿಯ ಅಧಿಕಾರಿಯನ್ನು ಕೇಳಿದರೆ ನಮಗೆ ಮುಖ್ಯ ಅಂಚೆ ಕಚೇರಿಯಿಂದ ಯಾವುದೇ ಸಹಕಾರ ಸಿಗುತ್ತಿಲ್ಲ , ಕಂಪೌಂಡ್ ವಿಷಯ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ, ಅಲ್ಲದೆ ಇರುವ ಸಿಬ್ಬಂದಿಯನ್ನು ಕಡಿತಗೊಳಿಸಿದೆ. ಈ ಮೊದಲು ದೊಡ್ಡದಾದ ಕಚೇರಿ ಇತ್ತು ಈಗ ಇರುವ ಕಚೇರಿಯಲ್ಲಿ ಆಧಾರ ವ್ಯವಸ್ಥೆಗೆ ಅರ್ಧ ಜಾಗ ತೆಗೆದು ಕೊಂಡಿರುತ್ತಾರೆ .
ಹೀಗಾಗಿ ಸಾರ್ವಜನಿಕರಿಗೆ ಕಷ್ಟವಾಗುತ್ತದೆ ಮತ್ತು ಈ ಹಿಂದೆ ಕೇವಲ ಒಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಇತ್ತು. ಆದರೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಆಕಡೆ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಮ್ಮ ಕಚೇರಿಯ ಮುಂದೆ ಜೋಡಿಸಿರುತ್ತಾರೆ. ಅಕ್ಕಪಕ್ಕದಲ್ಲಿಯೇ ಎರಡು ವಿದ್ಯುತ್ ಟ್ರಾನ್ಸ್ ಫಾರ್ಮರ್ ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನೆ ಮಾಡಿದರು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಕೇಂದ್ರ ಅಂಚೆ ಕಚೇರಿಯು ಸುತ್ತಲೂ ಕಂಪೌಂಡ್ ನಿರ್ಮಾಣ ಮತ್ತು ದೊಡ್ಡದಾದ ಕಚೇರಿ ಸ್ಥಳ ನೀಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಪಲುಗುಲ ನಾಗರಾಜ ಆಗ್ರಹಿಸಿರುತ್ತಾರೆ.