ಇಂಡಿ : ವಿಧ್ಯಾರ್ಥಿಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದಾಗ ಸುಮ್ನೆ ಕೂಡಬಾರದು, ಕೂಡಲೇ ಪಾಲಕರ ಅಥವಾ ಶಿಕ್ಷಕರ ಗಮನಕ್ಕೆ ತರಬೇಕು, ಕಾನೂನಿನ ಮೂಲಕ ಕೆಟ್ಟ ದುಷ್ಟ ವ್ಯಕ್ತಿಗಳಿಗೆ ಸರಿಯಾದ ಬುದ್ದಿ ಕಲಿಸಲು ಸಾಧ್ಯ ಎಂದು ಪಿಎಸ್ಐ ರೇಣುಕಾ ಹಳ್ಳಿ ಹೇಳಿದರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಗೌರವ ಹಾಗೂ ಪ್ರಸ್ತುತ ಸಮಾಜದಲ್ಲಿ ಸ೦ಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಪಟ್ಟಣದ ಗಾಂಧಿ ಬಾಜಾರದಲ್ಲಿರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ನಗರ ಪೊಲೀಸ್ ಠಾಣಾ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಅಪರಾಧಗಳಾಗುತ್ತಿವೆ. ಕಾನೂನಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವನೆಯೇ ಇದಕ್ಕೆ ಕಾರಣ. ಇಂಥ ಪ್ರಕರಣಗಳ ಬಗ್ಗೆ ವಿದ್ಯಾರ್ಥಿ, ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೆಗಟ್ಟುವ ಮಾಸಾಚರಣೆ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿ ಸಮೂಹದ ಮೇಲೆ ಅಪರಾಧ ತಡೆಗಟ್ಟುವ ಗುರುತರ ಜವಾಬ್ದಾರಿ ಇದ್ದು, ಮೊದಲು ವಿದ್ಯಾರ್ಥಿಗಳು ಜಾಗೃತಿಗೊಂಡು ಸಾರ್ವಜನಿಕರಿಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಮುಖ್ಯಗುರು ಯು ಎಚ್ ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇನ್ನೂ ಪಿಎಸ್ ಐ ಶಶಿಕಲಾ ಹಾಗೂ ಎ ಎಸ್ ಐ ಎಮ್ ಎಸ್ ಅರವತ್ತಿ ಕಾನೂನು ಅರಿವು ಕುರಿತು ಮಾತಾನಾಡಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕ ಎನ್ ಎ ಬಿರಾದಾರ, ಎಮ್ ಎ ಲಕ್ಡರ್, ಕೆ ಎಚ್ ಹೊಸಮನಿ, ಎಸ್ ಎಸ್ ಕಾಂಬಳೆ ಹಾಗೂ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದು, ಪಿಜಿ ಕಲ್ಮನಿ ಶಿಕ್ಷಕರು ನಿರೂಪಿಸಿದರು.