ಮಸ್ಕಿ : ರಾಮನಗರದ ಬಿಡದಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂದೆ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸಂಸದ ಸುರೇಶ್ ಹಾಗೂ ಅವರ ಸಹೋದರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಮಾತನಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಂಸದ ಸುರೇಶ್ ಅವರು ಸಚಿವ ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿರುವುದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಸುರೇಶ್ ಈ ರೀತಿ ನಡೆದುಕೊಂಡಿರುವುದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನವಾಗಿದೆ. ಕಾರ್ಯಕ್ರಮವನ್ನು ಹಾಳುಗೆಡಿಸುವ ಉದ್ದೇಶದಿಂದಲೇ ಇಂತಹ ವರ್ತನೆಯನ್ನು ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಅದಕ್ಕಾಗಿ ಪಕ್ಷದ ನಾಯಕರು ಗೂಂಡಾ ಪ್ರವೃತ್ತಿ ತೋರುತ್ತಿದ್ದಾರೆ. ಇಂತಹ ವರ್ತನೆಗಳನ್ನು ಬಿಜೆಪಿ ಸಹಿಸುವುದಿಲ್ಲ. ಬದಲಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರು, ಪುರಸಭೆ ಸದಸ್ಯರು, ಮಹಿಳಾ ಮೋರ್ಚಾ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.