ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ :ಪಿ.ಎಸ್.ವಸ್ತ್ರದ
ವಿಜಯಪುರ:ಶಾಲೆ-ಕಾಲೇಜುಗಳಲ್ಲಿ ಯುವ ಮತದಾರರಿಗೆ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಯುವ ಮತದಾರರಿಗೆ ಮತದಾನದ ಮಹತ್ವ ಹಾಗೂ ಅದರ ಪ್ರಾಮುಖ್ಯತೆ ತಿಳಿಸಿಕೊಟ್ಟು ಆ ಕುರಿತಾಗಿ,ಅವರನ್ನು ಪ್ರೇರೇಪಿಸುವುದು. ಕಾಲೇಜು ಹಂತಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ಗಳನ್ನು ನೋಂದಣಿ ಮಾಡಿಸುವುದು. ಸರ್ಕಾರಿ ಹಾಗೂ ಅರೆ-ಸರ್ಕಾರಿ ಕಚೇರಿಗಳಲ್ಲಿ ಚುನಾವಣಾ ಜಾಗೃತಿ ಮೂಡಿಸುವುದು. ಚುನಾವಣಾ ಸಾಕ್ಷರತಾ ಕ್ಲಬ್(ಇ.ಎಲ್.ಸಿ)ಗಳಡಿ ವಿನೂತನ ಚಟುವಟಿಕೆಗಳ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳುವಂತೆ ರಾಜ್ಯ ಸ್ವೀಪ್ ನೊಡಲ್ ಅಧಿಕಾರಿಗಳಾದ ಪಿ. ಎಸ್.ವಸ್ತ್ರದ ಅವರು ಹೇಳಿದರು.
ಅವರು,ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಶನಿವಾರ ಜಿಲ್ಲಾ ಮಟ್ಟದ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡಿರುವ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾನದ ಹಕ್ಕುಗಳ ಬಗ್ಗೆ ಯುವ ಮತದಾರರಿಗೆ ಅರಿವು ಮೂಡಿಸುವುದು,ಚುನಾವಣಾ ಜಂಟಿ ಸಮಿತಿಗಳನ್ನು ಸ್ಥಾಪಿಸುವುದು. ಯುವ ಮತದಾರರ ನೋಂದಣಿ ಮಾಡಿಸಬೇಕು. ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸುವುದು. ಇದಕ್ಕೆ ಪೂರಕವಾಗಿ ಮತದಾನ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು. ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಮತದಾನದ ಹಕ್ಕು, ನೋಂದಣಿ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸುವುದು. ಶಾಲಾ-ಕಾಲೇಜುಗಳು ಮತ್ತು ಗ್ರಾಮಗಳಲ್ಲಿ ವಿನೂತನ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲು ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಅವರು ಸೂಚಿಸಿದರು.
ರಾಜ್ಯ ಚುನಾವಣಾ ಆಯೋಗ ನೀಡುವ ನಿರ್ದೇಶನ, ಆಕರಿಸುವ ಮಾಹಿತಿ ಹಾಗೂ ಸೂಚನೆಗಳನ್ನು ಎಲ್ಲಾ ಬಿ.ಎಲ್.ಓಗಳಿಗೆ ವಾಟ್ಸಪ್ ಗ್ರೂಪ್ ಹಾಗೂ ಸಂದೇಶಗಳ ಮೂಲಕ ತಲುಪುವಂತೆ ಕ್ರಮ ವಹಿಸಬೇಕು. ವಿಶೇಷ ಸಾರಾಂಶ ಪರಿಷ್ಕರಣೆ (ಎಸ್.ಎಸ್.ಆರ್) ಮತ್ತು ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಸಂದರ್ಭದಲ್ಲಿ ಹೊಸ ಮತದಾರರ ಹೆಸರುಗಳನ್ನು ನೋಂದಣಿಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ, ಚುನಾವಣಾ ತಹಶೀಲ್ದಾರರಾದ ಪ್ರೇಮಸಿಂಗ್ ಪವಾರ, ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ಇ.ಎಲ್.ಸಿ ಸಂಯೋಜಕರುಗಳು ಮತ್ತಿತರರು ಉಪಸ್ಥಿತರಿದ್ದರು.


















