ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:- ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮೇಲ್ಮಾತಿ ಯುವತಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯನ್ನು ಹತ್ಯೆ ಮಾಡಿರುವುದು ಕೇವಲ ಒಂದು ಕುಟುಂಬದ ದುರಂತವಲ್ಲ, ಇದು ಸಂವಿಧಾನಕ್ಕೆ, ಮಾನವೀಯತೆಗೆ ಮತ್ತು ಸಮಾಜದ ಆತ್ಮಕ್ಕೆ ಎಸಗಿದ ಘೋರ ಅಪರಾಧವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣದ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಬಾಲಚಂದ್ರ ಹುಲ್ಲೂರ ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ಮಾತನಾಡಿ ಸಂವಿಧಾನಾತ್ಮಕವಾಗಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಜೀವನ ಸಂಗಾತಿಯನ್ನು ಆಯ್ಕೆಮಾಡುವ ಹಕ್ಕಿದೆ. ಆ ಹಕ್ಕನ್ನು ಕಿತ್ತುಕೊಂಡು, ಗರ್ಭದಲ್ಲಿದ್ದ ಮಗುವಿನೊಂದಿಗೆ ತಾಯಿಯನ್ನೇ ಕೊಂದು ಹಾಕಿರುವುದು ಕ್ಷಮಿಸಲಾರದ ಅಪರಾಧ. ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮನವಿಯಲ್ಲಿ, ಇನಾಂವೀರಾಪುರ ಗ್ರಾಮದ ಶ್ರೀಮತಿ ಮಾನ್ಯ ವಿವೇಕಾನಂದ ದೊಡ್ಡಮನಿ (20) ಎಂಬ ಗರ್ಭಿಣಿ ಯುವತಿ ಹತ್ಯೆ ಪ್ರಕರಣವನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಿ, ಆರೋಪಿಗಳಾದ ತಂದೆ ಪ್ರಕಾಶಗೌಡ ಪಾಟೀಲ ಸೇರಿದಂತೆ ಸಂಬಂಧಿಕರಾದ ವೀರನಗೌಡ ಹಾಗೂ ಅರುಣಗೌಡ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಲಾಯಿತು.
© 2026 VOJNews - Powered By Kalahamsa Infotech Private Limited.