ಉಪತಹಶೀಲ್ದಾರ ಕಿರುಕುಳಕ್ಕೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ..!
Voice Of Janata : Editor :
ಉಪ ತಹಸೀಲ್ದಾರ್ ಕಿರುಕುಳಕ್ಕೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹರತಲೆ ಗ್ರಾಮದ ಎಚ್.ಎಸ್ ಪರಮೇಶ್ (36) ಆತ್ಮಹತ್ಯೆ ಮಾಡಿಕೊಂಡವರು. ಪರಮೇಶ್ ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ನಾಡ ಕಛೇರಿಗೆ ತೆರಳಿ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನೆ ಮಾಡುತ್ತಿದ್ದ ವೇಳೆ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಿಂದ ಸಂಬಳ ಆಗದೆ ಇರುವುದು ಅತ್ಯಂತ ಬೇಸರವಾಗಿ ಜೀವನ ನಡೆಸುವುದು ಒಂದು ಸಮಸ್ಯೆಯಾಗಿದೆ. ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪ ತಹಸೀಲ್ದಾರ್ ಎನ್.ಪಿ ಶಿವಕುಮಾರ್ ಅವರು ನನಗೆ ಮಾನಸಿಕ ಹಿಂಸೆ ಹಾಗೂ ಕೆಲವು ಅವರ ವೈಯಕ್ತಿಕ ದ್ವೇಷದಿಂದ ಮನನೊಂದು ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ.
ನಾನು ಒಬ್ಬ ಅಂಗವಿಕಲ ಎಂದು ಗೊತ್ತಿದ್ದರೂ ಅವರು ನನ್ನ ಮೇಲೆ ದ್ವೇಷ ಸಾಧಿಸುತ್ತಾ ನನಗೆ ಮಾನಸಿಕ ಹಿಂಸೆ ಕೊಟ್ಟು, ನನ್ನನ್ನು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದಾರೆ. ನನ್ನ ಸಾವಿಗೆ ಹುಲ್ಲಹಳ್ಳಿ ನಾಡಕಚೇರಿಯ ಉಪ ತಹಸೀಲ್ದಾರ್ ಎನ್.ಪಿ ಶಿವಕುಮಾರ್ ಅವರೇ ನೇರ ಕಾರಣವಾಗಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಪರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.