ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಂದ ನಗರ ಪರಿವೀಕ್ಷಣೆ
ವಿವಿಧ ರಸ್ತೆಗಳ ಅಭಿವೃದ್ದಿ-ಅತಿಕ್ರಮಣ ತೆರವಿಗೆ ಸೂಚನೆ
ವಿಜಯಪುರ, ಆಗಸ್ಟ್ 29 : ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರ ಪರಿವೀಕ್ಷಣೆ ನಡೆಸಿ, ನಗರದ ವಿವಿಧ ರಸ್ತೆಗಳ ಅಭಿವೃದ್ದಿ, ಅತಿಕ್ರಮ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಬೆಳ್ಳಂಬೆಳಿಗ್ಗೆ ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಬಾಗಲಕೋಟ ರಸ್ತೆ, ಅತಾವುಲ್ಲಾ ಚೌಕ ಹತ್ತಿರ ಕಂದಕ ಹಾಗೂ ನೌಬಾಗ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗಳ ಪರಿವೀಕ್ಷಣೆ ಕೈಗೊಂಡಿದ್ದು, ನವಬಾಗ ರಸ್ತೆಯ ಅಗಲೀಕರಣ ಬಗ್ಗೆ ಸರ್ವೇ ಕಾರ್ಯವನ್ನು ಕೈಗೊಂಡು ಅತೀಕ್ರಮಣವನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು, ಪಾಲಿಕೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ ಸಂ.28ರÀ ಸರ್ಕಾರಿ ಪದವಿ ಪೂರ್ವ ಕಾಲೇಜಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಸದರಿ ಕಾಮಗಾರಿಯನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಒಡಾಟಕ್ಕೆ ಅನುಕೂಲ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.
ನಗರದಲ್ಲಿರುವ ಬೇಗಂ ತಾಲಾಬ ಕೆರೆ ಪರಿವೀಕ್ಷಣೆ ಕೈಗೊಂಡು, ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ, ಉದ್ಯಾನವನದಲ್ಲಿರುವ ಮೂಲಭೂತ ಸೌಕರ್ಯಗಳು, ಫೋಡ್ ಕೋರ್ಟ ಹಾಗೂ ಇತರೆ ಸೌಲಭ್ಯಗಳನ್ನು ಕೂಡಲೇ ಟೆಂಡರ್ ಕರೆದು ಕ್ರಮಕೈಗೊಳ್ಳಲು ಸೂಚಿಸಿದರು.
ನಗರದ ತಾಜ ಬಾವಡಿಯ ಪರಿವೀಕ್ಷಣೆಯ ಕೈಗೊಂಡು, ಸದರಿ ಬಾವಿಯ ಪುನಶ್ಚೇತನ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರದ ಶಿವಾಜಿ ವೃತ್ತದ ಹತ್ತಿರುವ ಇರುವ ಕಂದಕವನ್ನು ಹಾಗೂ ಬೇಗಂ ತಲಾಬ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆಯ ಮಹಾಪೌರರು ಹಾಕಿಕೊಂಡಿರುವ ಕಾಮಗಾರಿಯ ಯೋಜನೆಗಳನ್ನು ಪೂರ್ಣಗೊಳಿಸಬೇಕು. ನಗರದ ಸೋಲಾಪೂರ ರಸ್ತೆಯಲ್ಲಿರುವ ಕಬ್ರಸ್ತಾನ ಪರಿಶೀಲಿಸಿದ ಅವರು, ಕಾಂಪೌಂಡ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿವಿಧ ಸದಸ್ಯರು, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ತಹಶೀಲ್ದಾರ, ಪಾಲಿಕೆ ಅಭಿಯಂತರರು, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.