“ನಾವು ಏನನ್ನು ಮಾಡುತ್ತೇವೆಯೋ ಅದನ್ನೆ ಮಕ್ಕಳು ಅನುಕರಣೆ ಮಾಡುತ್ತಾರೆ” – ಡಾ|| ಗುರುರಾಜ ಪಾಟೀಲ
ವಿಜಯಪುರ : ತಂದೆ – ತಾಯಿಗಳಾದ ನಾವುಗಳು ಏನನ್ನು ಮಾಡುತ್ತೇವೆಯೋ ಅದನ್ನೆ ಮಕ್ಕಳು ಅನುಕರಣೆ ಮಾಡುತ್ತಾರೆ ಎಂದು ಡಾ|| ಗುರುರಾಜ ಪಾಟೀಲ ಖ್ಯಾತ ಮನೋವೈದ್ಯರು ಹಾಗೂ ಅತ್ಯುತ್ತಮ ತರಬೇತಿದಾರರು ಹುಬ್ಬಳ್ಳಿ, ಇವರು ವಿಜಯಪುರ ತಾಲೂಕಿನ ಕನ್ನೂರಿನ ಶಾಂತಿ ಕುಟೀರದಲ್ಲಿ ಸತತ ೨೩ ವರ್ಷಗಳಿಂದ ನಡೆಯುತ್ತಿರುವ ಉಚಿತ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಬೇಸಿಗೆ ಶಿಬಿರದಲ್ಲಿ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕನ್ನೂರಿನ ಶಾಂತಿಕುಟೀರದಲ್ಲಿ ನಡೆಯುತ್ತಿರುವ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ್ದ ಪಾಲಕರ ಸಭೆಯನ್ನ ಕುರಿತು ಮಾತನಾಡಿ ತಮ್ಮ ಮಗನ ನೈಜ ಉದಾಹರಣೆಯನ್ನು ನೀಡುವುದರ ಮೂಲಕ ೬ನೇ ತರಗತಿಯಲ್ಲಿ ತಮ್ಮ ಮಗನು ಕಡಿಮೆ ಅಂಕಗಳನ್ನು ಪಡೆದಾಗ, ಆ ಶಾಲೆಯ ಪ್ರಾಂಶುಪಾಲರು ಪಾಲಕರ ಸಭೆಗೆ ಹಾಜರಾದಾಗ, ಮಗನ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದಾಗ, “ನಾನು ಈ ಒಂದು ವರ್ಷ ಅವಕಾಶ ಕೊಡಿ, ಬದಲಾವಣೆ ಮಾಡುತ್ತೇನೆ” ಎಂದು ಕೇಳಿಕೊಂಡು ಬಂದು ಮಾಡಿದ ಪ್ರಯತ್ನ ಹಾಗೂ ಅದರಿಂದಾದ ಸಫಲತೆಯ ಅನುಭವವನ್ನು ಸಭೆಯಲ್ಲಿ ಹಂಚಿಕೊಂದರು. ಮಕ್ಕಳ ಯೋಗ್ಯ ಪ್ರಗತಿಗೆ ಅವರ ಓದಿನ ಕಡೆಗೆ ಪಾಲಕರ ಗಮನದ, ಜೊತೆಗೆ ಮಕ್ಕಳ ಆಸಕ್ತಿಯನ್ನು ಅರಿತು ಆ ನಿಟ್ಟಿನಲ್ಲಿ ಕಲಿಸುವ ಪ್ರಯತ್ನ ಯಶಸ್ಸು ಕೊಡುತ್ತದೆ ಎಂಬುದನ್ನು ಸ್ವ ಉದಾಹರಣೆಯಿಂದ ತಿಳಿಸಿದರು. ಒಂದು ವರ್ಷದ ತಮ್ಮ ಯೋಗ್ಯ ಪ್ರಯತ್ನದಿಂದ ತಮ್ಮ ಮಗನು ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಎಂದು ಹೇಳಿದುದು ಗಮನಾರ್ಹವಾಗಿತ್ತು. ಪಾಲಕರಾದ ನಾವುಗಳು ನಿತ್ಯ ಒತ್ತಡದ ಕೆಲಸದ ಮಧ್ಯ ಸ್ವಲ್ಪ ಸಮಯವಾದರೂ ಮಕ್ಕಳ ಓದಿನ ಕಡೆ ಲಕ್ಷ್ಯವಹಿಸಿ ಎಂದು ತಿಳಿಸಿದರು. ಮಕ್ಕಳಿಗೆ ಶಾಲೆಯಿಂದ ಬಂದ ತಕ್ಷಣ ಪಾಲಕರೆದುರಿಗೆ ಶಾಲೆಯ ಇಡೀ ದಿನದ ವಾರ್ತಾಲಾಪ ಮಾಡುವದಿರುತ್ತದೆ. ಇದನ್ನು ಯಾವತ್ತು ದುರ್ಲಕ್ಷಿಸದಿದ್ದರೆ ಮಕ್ಕಳ ಮತ್ತು ತಾಯಿ ತಂದೆಯ ಸಂಬಂಧ ಗಟ್ಟಿಗೊಳ್ಳುತ್ತದೆ. ಇದನ್ನು ಬಂಗಾರದ ಸಮಯವೆಂತಲೂ ಅವರು ಹೇಳಿದರು.
ನಂತರ ಮಾತನಾಡಿ “Eat at Eight” ಎನ್ನುವ ವಾಕ್ಯದಂತೆ ನಾವು ರಾತ್ರಿ ಬೇಗನೇ ಊಟ ಮಾಡಿ ಮಲಗಿಸಿ ಬೆಳಿಗ್ಗೆ ಬೇಗ ಎಬ್ಬಿಸುವುದರಿಂದ ಮಕ್ಕಳ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹಾಗೂ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ತಿಳಿಸಿದರು. ಹೀಗೆ ಪಾಲಕರು ದಿನಾಲು ತಮ್ಮ ಮಗುವಿನ ಓದಿನ ಕಡೆ ಗಮನವಹಿಸುತ್ತಾ ದಿನಂಪ್ರತಿ ೧ ರಿಂದ ೨ ಗಂಟೆ ಆಟವಾಡಲು ಬಿಡಬೇಕು ಎಂದು ಆಗ್ರಹಿಸಿದರು. ನಂತರ ಪಾಲಕರಿಗೆ ವಿಶೇಷವಾಗಿ ತಾಯಂದಿರಿಗೆ ದಿನದಲ್ಲಿ ಒಮ್ಮೆಯಾದರೂ ಮನೆಯವರೇಲ್ಲಾರು ಒಟ್ಟಾಗಿ ಕುಳಿತು ಊಟ ಮಾಡಿರಿ, ಬೇಕಾದರೆ,ಒಂದೇ ಚಾನೆಲ್ ಟಿ.ವಿ.ಯನ್ನು ಒಟ್ಟಾಗಿ ನೋಡಿ ಎಂದು ತಿಳಿಸಿದರು.
ಕೊನೆಯಲ್ಲಿ ಪಾಲಕರ ಕಡೆಯಿಂದ ಶ್ರೀ ರಾಜೇಶ್ ಗೊಂಧಳಿ ಪಾಲಕರ ಸಭೆಯ ಕುರಿತು ಮೆಚ್ಚುಗೆಯ ನುಡಿಗಳನ್ನು ಹೇಳಿದರು. ಈ ದಿನಮಾನಗಳಲ್ಲಿ ಇಂತಹ ಪಾಲಕರ ಸಭೆ ಬಹಳ ಮಹತ್ವದ್ದು ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಶ್ರೀ ಶರಣಬಸಪ್ಪ ಎಂ.ಜಿ. ನಿರ್ವಹಿಸಿದರು ಪ್ರ‍್ರಾಸ್ತಾವಿಕವಾಗಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್ ನಾನಾವಟೆಯವರು ಮಾತನಾಡಿದರು ನಂತರ ಕೊನೆಯಲ್ಲಿ ರಾಮರಾಜ್ಯ ಕಲಾ ಮೇಳದ ಅಧ್ಯಕ್ಷರಾದ ಶ್ರೀಕೃಷ್ಣ ಸಂಪಗಾಂವಕರ ಗುರೂಜಿ ಸರ್ವರಿಗೂ ವಂದಿಸಿ, ಶ್ರೀಯುತ ಡಾ|| ಗುರುರಾಜ ಪಾಟೀಲ್ ರವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶ್ರೀ ಅಜಿತ ಕನ್ನೂರ ಹಿರಿಯ ಗುರುಬಂಧುಗಳು, ಶ್ರೀ ವೈ.ಹೆಚ್. ಪವಾರ,ಚಾಣುಕ್ಯ ಕರಿಯರ್ ಅಕಾಡೆಮಿ ಶಿಕ್ಷಕರು ಹಾಗೂ ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶಿಕ್ಷಕರು ಹಾಗೂ ಕನ್ನೂರ ಮತ್ತು ಸುತ್ತಮುತ್ತಲಿನ ಗ್ರಾಮದ ೨೦೦ ಪಾಲಕರು ಉಪಸ್ಥಿತರಿದ್ದರು.


















