ರಾಯಚೂರು: ಮಕ್ಕಳ ಹಕ್ಕುಗಳು ಚೈಲ್ಡ್ ಲೇಬರ್, ಕೌಟುಂಬಿಕ ಕಲಹಗಳನ್ನು ತಡೆಯುವಲ್ಲಿ ಮುಂದಾಗಬೇಕು. ಮಕ್ಕಳು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವುಗಳನ್ನು ತಿಳಿದು ಧೈರ್ಯ ಹೇಳುವಂಥವರಾಗಬೇಕು ಹಾಗೂ ಅವುಗಳನ್ನು ಹೇಗೆ ಸರಿಪಡಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಳಿಸುವವರಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶಶಿಕಾಂತ ಶಿವಪೂರೆ ಅವರು ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗಾಗಿ ಮಕ್ಕಳ ಗ್ರಾಮ ಸಭೆ ಅನುಷ್ಠಾನ ಮತ್ತು ಮಕ್ಕಳ ಸಂರಕ್ಷಣೆಯಲ್ಲಿ ಗ್ರಾಮಪಂಚಾಯತಿಗಳ ಪಾತ್ರ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರದ ಉದ್ಘಾಟಕರಾಗಿ ಮಾತನಾಡಿದ ಅವರು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮಕ್ಕಳ ಸಮಸ್ಯೆಗಳನ್ನು ಕುರಿತು ಸುದೀರ್ಘವಾಗಿ ಅರಿಯಲು ಹಾಗೂ ಮಕ್ಕಳನ್ನು ತಯಾರಿ ಮಾಡುವ ನಿಟ್ಟಿನಲ್ಲಿ ತಿಳಿಯಲು ಒಂದು ದಿನದ ಕಾರ್ಯಗಾರವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮನ್ಸೂರ್ ಅಹಮದ್. ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ವೀರನಗೌಡ, ಸಂಪನ್ಮೂಲ ವ್ಯಕ್ತಿಗಳಾಗಿ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಆಯೋಜಕರಾದ ಕೆ.ರಾಘವೇಂದ್ರ ಭಟ್,ಹಾಗೂ ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.