ರಾಯಚೂರು : ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಪೂರೈಸುವಲ್ಲಿ ಲೋಪದೋಷ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಕಲುಷಿತ ಕುಡಿವ ನೀರಿನ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲನೆ ಮತ್ತು ಮುಂದಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚಿಸಿದರು. ಕಲುಷಿತ ಕುಡಿವ ನೀರಿನ ಪ್ರಕರಣ ಮತ್ತೇ ಮರುಕಳುಹಿಸದಂತೆ ನಗರಸಭೆ ಅಧಿಕಾರಿಗಳು ಎಚ್ಚರ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ನೀರು ಶುದ್ಧೀಕರಣ ಪ್ರಕ್ರಿಯೆ, ನಿರಂತರ ನಿಗಾ ಮತ್ತು ನಗರದಲ್ಲಿ ಎಲ್ಲಿಯಾದರೂ ಪೈಪ್ ಲೀಕೇಜ್ ಇದ್ದಂತಹ ಪ್ರಕರಣಗಳನ್ನು ಪರಿಶೀಲಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಗೊಂಡರೇ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ.
ಪ್ರತಿ ವಾರ್ಡ್‌ಗಳೂ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಬೇಕು. ಕುಡಿವ ನೀರಿನ ಶುದ್ಧತೆ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಪಡೆಯಬೇಕು. ಸ್ಥಳೀಯ ಜನರಿಂದ ಬರುವ ಅಹವಾಲುಗಳನ್ನು ಪರಿಶೀಲಿಸಿ, ತಕ್ಷಣವೇ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಗೊಳಿಸಬೇಕು. ನಗರದ ವಾರ್ಡ್ ನಂ. 01 ರಿಂದ 14 ರವರೆಗೆ ಮತ್ತು 34,35 ವಾರ್ಡ್‌ಗಳಿಗೆ ರಾಂಪೂರು ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ವಾರ್ಡ್ ನಂ 4 ರ ಇಂದಿರಾ ನಗರದಲ್ಲಿ ಮಾತ್ರ ಕಲುಷಿತ ನೀರು ಸರಬರಾಜು ಪೈಪ್ ಲೈನ್‌ಗಳ ಲೀಕೇಜ್ ಇದ್ದರು ಅದನ್ನು ಸರಿಪಡಿಸಬೇಕು ಎಂದರು. ರಾಂಪೂರು ಜಲಾಶಯದಿಂದ ನಗರಕ್ಕೆ ನೀರು ಸರಬರಾಜು ಪೂರ್ವ ಕುಡಿವ ನೀರು ಶುದ್ಧೀಕರಣಕ್ಕೆ ಬ್ಲಿಚಿಂಗ್ ಪೌಡರ್ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ವಿವಿಧ ಶುದ್ಧೀಕರಣ ಘಟಕದಲ್ಲಿ ಜಂಗಲ್ ಕಟಿಂಗ್ ಮಾಡಲು ಸೂಚನೆ ನೀಡಿದರು. ನೀರು ಶುದ್ಧೀಕರಣಕ್ಕೆ ಹೊಸ ಶುದ್ಧೀಕರಣ ಘಟಕಗಳನ್ನು ನಿರ್ಮಿಸಬೇಕೆಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಲಲಿತಾ ಕಾಡಗೋಳ, ಪೌರಾಯುಕ್ತರು ಹಾಗೂ ನಗರಸಭೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.