ವಿಜಯಪುರತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಇಓ ರಿಷಿ ಆನಂದ
ವಿಜಯಪುರ, ಆಗಸ್ಟ್ 30 :ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ರವರು ವಿಜಯಪುರ ತಾಲೂಕಿನ ಹೆಗಡಿಹಾಳ ಮತ್ತು ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಶುಕ್ರವಾರ ಹೆಗಡಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಕುಮನಾಳ ಗ್ರಾಮದಲ್ಲಿ ಹೊಸ ಕಟ್ಟಡದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಕ್ಕಳಿಗೆ ನಿಯಮಿತವಾಗಿ ಪೌಷ್ಠಿಕ ಆಹಾರ ಮತ್ತು ಮಕ್ಕಳಿಗೆ ಕುಳಿತುಕೊಳ್ಳಲು ಪೀಠೋಪಕರಣಗಳನ್ನು ಒದಗಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.
ಹೆಗಡಿಹಾಳ ಗ್ರಾಮದ ಎಚ್.ಪಿ.ಎಸ್ ಶಾಲೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಟಾನನಗೊಳಿಸಿದ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು,ಸರ್ಕಾರಿ ಶಾಲೆಯಲ್ಲಿ ಭೋಜನಾಲಯ ಮತ್ತು ಅಡುಗೆ ಕೋಣೆ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಶಾಲಾ ಆವರಣದಲ್ಲಿ ಪೌಷ್ಠಿಕ ಕೈತೋಟ ಹಾಗೂ ಶಾಲಾ ಕಂಪೌಂಡ ಸುತ್ತಲು ಸಸಿ ನೆಡಲು ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತಿಯ ಆವರಣದಲ್ಲಿ ಇರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿ ದೇಶದ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಗೂ ರ್ಯಾಕ್‍ಗಳಲ್ಲಿ ವಿವಿಧ ಪುಸ್ತಕಗಳನ್ನು ಇರಿಸುವಂತೆ ಹಾಗೂ ಅರಿವು ಕೇಂದ್ರದ ನಾಮಫಲಕವನ್ನು ಅಳವಡಿಸುವಂತೆ ಗ್ರಂಥಪಾಲಕರಿಗೆ ಸೂಚಿಸಿದರು. ಬಳಿಕ ಅಂಗನವಾಡಿ ಕೇಂದ್ರ ಹಾಗೂ ಶಿಶು ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ, ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಶಿಶುಪಾಲನಾ ಕೇಂದ್ರದ ಮಕ್ಕಳ ಆರೈಕೆದಾರರಿಗೆ ಕೇಂದ್ರಗಳಲ್ಲಿ ಮಕ್ಕಳಿಗೆ ಪ್ರತಿದಿನ ಉತ್ತಮ ಗುಣಮಟ್ಟವುಳ್ಳ ಪೌಷ್ಠಿಕ ಆಹಾರ ಒದಗಿಸಬೇಕು ಮತ್ತು ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ,ಆಸ್ಪತ್ರೆಯಲ್ಲಿನ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ಪ್ರತಿದಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ನಂತರ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉತ್ನಾಳ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಪ್ರಗತಿ ಹಂತದಲ್ಲಿರುವ ಜಲಧಾರೆ ಕಾಮಗಾರಿ ವೀಕ್ಷಣೆ ಮಾಡಿದರು. ಹಿಟ್ಟಿನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಅವರು, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಪ್ರತಿದಿನ ಸಂಗ್ರಹಿಸಿರುವ ಕಸವನ್ನು ವಿಂಗಡಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹಿಟ್ಟಿನಹಳ್ಳಿ ಗ್ರಾಮದ ಅಮೃತ ಸರೋವರ ಕಾಮಗಾರಿಯನ್ನು ವೀಕ್ಷಣೆ ಮಾಡಿ,ಕೆರೆಯ ದಡದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಸೌಂದರ್ಯೀಕರಣಗೊಳಿಸಲು ಸೂಚಿಸಿದರು. ಬಳಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಸ್ಮಾರ್ಟ ಫೋನ್ ಳಲ್ಲಿ ‘ಓದುಬೆಳಕು’ ಆಪ್ ಅನ್ನು ಮಕ್ಕಳು ಬಳಕೆ ಮಾಡುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು. ಶಿಶುಪಾಲನ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಓದುವಿಕೆ ಹಾಗೂ ಕಲಿಕಾ ವಿಧಾನವನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ರಾಠೋಡ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕಾಸಿಮಸಾಬ ಮಸಳಿ, ಜಿಲ್ಲಾ ಪಂಚಾಯತಿಯ ಎ.ಡಿ.ಪಿ.ಸಿ ಪೃಥ್ವಿರಾಜ ಪಾಟೀಲ, ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಮೋದಿನಿ ಎಸ್ ಬಳೊಲಮಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಬಸವರಾಜ ಜಿಗಳೂರ, ಹೆಡಗಿಹಾಳ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಾದ ಸುರೇಶ ಕಳ್ಳಿಮನಿ, ಹಿಟ್ಟಿನಹಳ್ಳಿ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಾದ ರಾಜಶೇಖರ ಬಿರಾದಾರ, ತಾಲೂಕ ಪಂಚಾಯತಿಯ ತಾಂತ್ರಿಕ ಸಂಯೋಜಕರಾದ ಪರಶುರಾಮ ಶಹಾಪೂರ, ತಾಲೂಕ ಆಯ್.ಇ.ಸಿ ಸಂಯೋಜಕರಾದ ರಾಘವೇಂದ್ರ ಭಜಂತ್ರಿ ಹಾಗೂ ತಾಂತ್ರಿಕ ಸಹಾಯಕರು ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.