ಮನಸ್ಸಿನ ನೆಮ್ಮದಿಗೆ ಯೋಗಾಭ್ಯಾಸ ರೂಡಿಸಿಕೊಳ್ಳಲು ಸಿಇಓ ರಿಷಿ ಆನಂದ ಕರೆ
ವಿಜಯಪುರ, ಜೂನ್ 19 : Voice Of Janata :
ಮನಸ್ಸಿನ ನೆಮ್ಮದಿಗಾಗಿ ದಿನಂಪ್ರತಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ವಿಶ್ವ ಯೋಗ ಮಹತ್ವ ಕುರಿತ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಯೋಗ ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ನಾವು ದಿನನಿತ್ಯ ಯೋಗ ಮಾಡುವುದರಿಂದ ಜೀವನದಲ್ಲಿ ಏಕಾಗ್ರತೆಯನ್ನು ಸಾಧಿಸಬಹುದು. ಮನಸ್ಸಿನ ನೆಮ್ಮದಿಗೆ ಎಲ್ಲರೂ ಪ್ರತಿದಿನ ಯೋಗ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ ಯೋಗವು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಬಹಳ ಹಿಂದಿನಿಂದಲೂ ಯೋಗವು ಪ್ರಚಲಿತವಿದ್ದು ಯೋಗದಿಂದ ಹಲವಾರು ಪ್ರಯೋಜನಗಳಿವೆ. ದಿನನಿತ್ಯ ಯೋಗದಿಂದ ಜೀವನದಲ್ಲಿ ರೋಗ ಮುಕ್ತಿ, ಮಾನಸಿಕ ಶಾಂತಿ, ದೈಹಿಕ ಸದೃಢತೆ, ಆಯಸ್ಸು ವೃದ್ದಿ ಇವೆಲ್ಲವುಗಳನ್ನು ನಾವುಗಳು ಪಡೆದುಕೊಳ್ಳಬಹುದಾಗಿದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗವು ಮಹತ್ವದ ಪಾತ್ರ ವಹಿಸಿದೆ. ಯೋಗದ ಮಹತ್ವದ ಉಪಯೋಗಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಈ ಯೋಗ ಪದ್ದತಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೊಣ ಜೂನ್ 21 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಿ ಎಂದು ಅವರು ಹೇಳಿದರು.
ಕರ್ಪೂರಮಠ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎನ್.ಎಮ್ ರುದ್ರಗೌಡರ, ಪ್ರಜಾಪಿತ ಬ್ರಹ್ಮಕುಮರಿ ಈಶ್ವರಿಯ ವಿದ್ಯಾಲಯ ಮತ್ತು ಪತಂಜಲಿ ಜಯೋಗ ಸಮಿತಿ ಮುಖ್ಯಸ್ಥರು ಮಾತನಾಡಿದರು.
ಯೋಗ ನಡಿಗೆ ಜಾಥಾ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಚಾಲನೆಗೊಂಡು, ಗಾಂಧಿ ಚೌಕ ಮಾರ್ಗವಾಗಿ ಬಸವೇಶ್ವರ ವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದವರೆಗೂ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ ಅಧಿಕರಿಗಳಾದ ಡಾ. ರಾಮನಗೌಡ ಎಸ್.ಪಾಟೀಲ್, ಬಿ.ಎಲ್.ಡಿ.ಇ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಡಾ.ಸತೀಶ.ಎಸ್. ಪಾಟೀಲ, ಬಿ.ಎನ್.ಎಮ್ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಪಿ.ಆರ್. ವಸ್ತ್ರದ, , ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.