ಕೇಂದ್ರ ತಂಡದಿಂದ ಜಿಲ್ಲೆಯ ನೈಸರ್ಗಿಕ ವಿಕೋಪ ಹಾನಿ- ಬೆಳೆಹಾನಿ ಸಮೀಕ್ಷೆ
ವಿಜಯಪುರ, ಜ.12 : ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರಾದ ಮಹೇಶಕುಮಾರ,ಇಸ್ರೋ ಬಾಹ್ಯಾಕಾಶ ಇಲಾಖೆಯ ಆಕಾಶ ಮೋಹನ್, ಬೆಂಗಳೂರಿನ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ಶ್ರೀಮತಿ ಹೊನ್ನಂಬ ಅವರನ್ನೊಳಗೊಂಡ ತಂಡ ಇಂದು ವಿಜಯಪುರ ಜಿಲ್ಲೆಗೆ ಆಗಮಿಸಿ ಮುಂಗಾರು ಹಂಗಾಮಿನ ಬೆಳೆ ಹಾನಿ ಹಾಗೂ ಪ್ರವಾಹ-ನೈಸರ್ಗಿಕ ವಿಕೋಪದಿಂದ ಜನ-ಜಾನುವಾರು ಹಾನಿಗಳ ಕುರಿತು ಪರಿಶೀಲನೆ ನಡೆಸಿತು.
ಸೋಮವಾರ ವಿಜಯಪುರಕ್ಕೆ ಭೇಟಿ ನೀಡಿದ ತಂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡ, ಜಿಲ್ಲೆಯಲ್ಲಿ ಮುಂಗಾರಿನಲ್ಲಿ 314578 ಹೆಕ್ಟೇರ್ ಕೃಷಿ ಬೆಳೆ ಹಾಗೂ 31692 ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಎನ್‍ಡಿಆರ್‍ಎಫ್-ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 35665.09 ಲಕ್ಷ ರೂ. ಕೃಷಿ ಬೆಳೆ ಹಾಗೂ 4453 ಲಕ್ಷ ರೂ.ಗಳ ತೋಟಗಾರಿಕೆ ಬೆಳೆ ಸೇರಿದಂತೆ 40118.09 ಲಕ್ಷ ರೂ.ಗಳನ್ನು ಹಾನಿಯನ್ನು ಅಂದಾಜಿಸಲಾಗಿದೆ.
ಪ್ರವಾಹ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ ಕಳೆದ ಜೂನ-01 ರಿಂದ ಸೆ.30ರವರೆಗಿನ ಅವಧಿಯಲ್ಲಿ 192736 ಹೆಕ್ಟೇರ್ ಕಡಲೆ, 45632 ಹೇ. ಮೆಕ್ಕೆಜೋಳ, 3264 ಹೇ. ಸಜ್ಜೆ, 66994 ಹೇ.ಹತ್ತಿ, 2274 ಹೇ. ಸೂರ್ಯಪಾನ, 231.9 ಹೇ.ಹಸಿರು ಕಾಳು, 568 ಹೇ. ಹೆಸರು ಬೆಳೆ, 1962.9 ಹೇ.ಕಬ್ಬು, 6 ಹೇ.ಸೋಯಾಬಿನ, 909.19 ಹೇ. ಶೇಂಗಾ ಬೆಳೆ ಸೇರಿದಂತೆ ಒಟ್ಟಾರೆ 314577.59 ಹೇ. ಬೆಳೆ ನಾಶವಾಗಿದೆ.
ಪ್ರವಾಹ ಪರಿಸ್ಥಿತಿ ಸೇರಿದಂತೆ ನೈಸರ್ಗಿಕ ವಿಕೋಪದಿಂದ 115.07 ಕಿ.ಮೀ. ಪಿಡಬ್ಲೂಡಿ ರಸ್ತೆಗಳು 2939.71 ಕಿ.ಮೀ. ಪಿಆರ್‍ಇಡಿ ರಸ್ತೆ, 1557.6 ಮೀ. ವಿವಿಧ ಗ್ರಾಮಗಳ ಸೇತುವೆ, ಮೋರಿಗಳು, 506 ಶಾಲೆ-ಅಂಗನವಾಡಿಗಳ ಕಟ್ಟಡ, 01 ಪ್ರಾಥಮಿಕ ಆರೋಗ್ಯ ಕೇಂದ್ರ, ಸಣ್ಣ ನೀರಾವರಿ-ಜಿಲ್ಲಾ ಪಂಚಾಯತಿಯ 11 ಟ್ಯಾಂಕ್‍ಗಳು, ಆರ್‍ಡಬ್ಲೂಎಸ್‍ನ 61 ಕಾಮಗಾರಿಗಳು, ನಗರ ಹಾಗೂ ಗ್ರಾಮೀಣದ 1418 ಮನೆಗಳು ಹಾಗೂ ಹೆಸ್ಕಾಂ ಇಲಾಖೆಯ 1520 ಪೋಲ್ಸ್ ಮತ್ತು ಟ್ರಾನ್ಸ್‍ಫಾರ್ಮಗಳ ಹಾನಿ ಒಟ್ಟು 36427.72 ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ.ಬೆಳೆ ಹಾನಿ ಹಾಗೂ ಇತರೆ ರಸ್ತೆ, ಮನೆಗಳು, ಶಾಲೆ-ಅಂಗನವಾಡಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 76545.81 ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಳೆದ 2025ನೇ ಸಾಲಿನ ಏಪ್ರಿಲ್ ಮಾಹೆಯಿಂದ ಡಿಸೆಂಬರ್ ಮಾಹೆಯವರೆಗೆ ನೈಸರ್ಗಿಕ ವಿಕೋಪದಿಂದ ಜಿಲ್ಲೆಯಲ್ಲಿ 11 ಮಾನವ ಹಾನಿ, 70 ಜಾನುವಾರು, ಶೇ.15ರಿಂದ20 ವರೆಗಿನ 1329 ಮನೆಗಳು, ಶೇ.20ರಿಂದ 50 ವರೆಗಿನ 592 ಮನೆಗಳು, ಶೇ.50 ರಿಂದ 75 ರವರೆಗಿನ 64 ಮನೆಗಳು,606 ಬಟ್ಟೆ-ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಚಡಚಣ ತಾಲೂಕಿನ 8 ಗ್ರಾಮಗಳು, ಇಂಡಿ ತಾಲೂಕಿನ 14 ಹಾಗೂ ಆಲಮೇಲ ತಾಲೂಕಿನ 8 ಗ್ರಾಮಗಳು ಪ್ರವಾಹಕ್ಕೊಳಗಾಗಿದ್ದು, ಕೃಷಿ ನದಿ ಪ್ರವಾಹದಿಂದ ಮುದ್ದೇಬಿಹಾಳ ತಾಲೂಕಿನ 9 ಗ್ರಾಮಗಳು, ನಿಡಗುಂದಿ ತಾಲೂಕಿನ 5 ಹಾಗೂ ಬಬಲೇಶ್ವರ ತಾಲೂಕಿನ 3 ಗ್ರಾಮಗಳು ಮತ್ತು ಡೋಣಿ ನದಿ ಪ್ರವಾಹದಿಂದ ತಿಕೋಟಾ ತಾಲೂಕಿನ 3 ಗ್ರಾಮಗಳು, ವಿಜಯಪುರ, ಬಬಲೇಶ್ವರ ಹಾಗೂ ಬಸವನಬಾಗೇವಾಡಿ ತಾಲೂಕಿನ ತಲಾ ಒಂದು ಗ್ರಾಮಗಳು, ಹಾಗೂ ದೇವರಹಿಪ್ಪರಗಿ ತಾಲೂಕಿನ 4 ಮತ್ತು ತಾಳಿಕೋಟೆ ತಾಲೂಕಿನ 12 ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದು, ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸಿ, ಸುರಕ್ಷಿತವಾಗಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಇಂಡಿ ತಾಲೂಕಿನಲ್ಲಿ 08 ಹಾಗೂ ಆಲಮೇಲ ತಾಲೂಕಿನಲ್ಲಿ 09 ಸೇರಿದಂತೆ ಒಟ್ಟು 17 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, 220 ಕುಟುಂಬಗಳ 1027 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂಬುದರ ಕುರಿತು ತಂಡ ಸಮಗ್ರವಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿತು.
ತಂಡದಿಂದ ಸ್ಥಳ ಭೇಟಿ-ಪರಿಶೀಲನೆ : ಸಭೆಯ ನಂತರ ಕೇಂದ್ರ ತಂಡ ಜಿಲ್ಲೆಯ ವಿಜಯುರ ತಾಲೂಕಿನ ಕನ್ನಾಳ ಗ್ರಾಮಕ್ಕೆ ಭೇಟಿ ನೀಡಿ ಭೀಮಾಶಂಕರ ಸ್ವಾಮೀಜಿಯವರ ಹೊಲದಲ್ಲಿನ ತೊಗರಿ ಬೆಳೆ ಹಾನಿಯನ್ನು ವೀಕ್ಷಣೆ ನಡೆಸಿತು. ಹೊರ್ತಿ ಗ್ರಾಮದ ಪರಗೊಂಡ ಮಲ್ಲಪ್ಪ ಅಂಕೋಲೆ ಅವರು 5 ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಹಾನಿಯನ್ನು ಪರಿಶೀಲನೆ ನಡೆಸಿತು. ನಂತರ ತಂಡ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಹಾನಿಗೊಳಗಾದ ಹೊರ್ತಿ ಕೆರೆ ವೀಕ್ಷಿಸಿ, ಈ ಕೆರೆಯಿಂದ ಸುಮಾರು ಒಂದು ಸಾವಿರ ಎಕರೆ ಭೂಮಿ ನೀರಾವರಿಗೊಳಪಡುವುದರಿಂದ ಕೆರೆ ದುರಸ್ತಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ 3.6 ಕೋಟಿ ರೂ. ವೆಚ್ಚದಲ್ಲಿ ಕೆರೆ ದುರಸ್ತಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಿ ಕೆರೆ ದುರಸ್ತಿ ಕಾರ್ಯ ಕೈಗೊಂಡು ಕಾಮಗಾರಿಯನ್ನು 3 ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ ಪ್ರಶಾಂತ ಕಡಕಭಾವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪನಿರ್ದೇಶಕ ಚಂದ್ರಕಾಂತ ಪವಾರ, ಶರಣಗೌಡ ಪಾಟೀಲ, ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮಂಜುನಾಥ ಜಾನಮಟ್ಟಿ, ಇಂಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಮಠ, ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಎಸ್.ಎಸ್.ಕರಭಂಟನಾಳ, ಚಂದ್ರಕಾಂತ ಸೋರೇಗಾಂವ, ರೈತ ಮುಖಂಡರುಗಳಾದ ಅಣ್ಣಪ್ಪ ಖೈನೂರ, ಸುಧೀರ ಅಂಕೋಲೆ, ಸುಗಪ್ಪ ಶೆಟ್ಟಿ, ಮಹಾಸಿದ್ದ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


















