ಯಾದಗಿರಿ: ವಡಗೇರಾ ತಾಲ್ಲೂಕಿನ ಕೊಂಕಲ್ ಪ್ರೌಢ ಶಾಲೆಯ ಶಿಕ್ಷಕಿ ಪದ್ಮಲತಾ ಆರ್. ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆ ಅವರು ತಾವು ಸುದೀರ್ಘ ಸೇವೆ ಸಲ್ಲಿಸಲು ಸಹಕರಿಸಿದ ಊರಿನ ಜನತೆಗೆ ಅಭಿನಂದನೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಜೊತೆಗೆ ತಮ್ಮ ಕಡೆಯಿಂದ ಶಾಲೆಗೆ ಕಿರು ಕಾಣಿಕೆಯನ್ನು ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು ಶಾಲೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಓದು, ತುಂಟತನ, ಉತ್ತಮ ನಡತೆ ಸೇರಿ ಇನ್ನಿತರ ಚಟುವಟಿಕೆಗಳನ್ನು ಮೆಲುಕು ಹಾಕಿದರು. ತಾವು ಶಾಲೆಗಳಲ್ಲಿ ಕಳೆದ ದಿನಗಳನ್ನು ನೆನೆದು ಭಾವುಕರಾದರು.
ಈ ವೇಳೆಯಲ್ಲಿ ಕೊಂಕಲ್ ಸೇರಿ ಸುತ್ತಲಿನ ಗ್ರಾಮಗಳ ಪೋಷಕರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.