ಶಾಲಾ ಆವರಣದಲ್ಲಿ ಬಂಥನಾಳ ಶ್ರೀ ಮೂರ್ತಿ ಅನಾವರಣ..!
ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದ ಮೋರಾರ್ಜಿ
ದೇಸಾಯಿ ವಸತಿ ಪ್ರೌಢ ಶಾಲೆಯ ಮುಂಭಾಗದ
ಆವರಣದಲ್ಲಿ ಈಚೆಗೆ ಇಲ್ಲಿನ ಹಳೆಯ ವಿದ್ಯಾರ್ಥಿ
ಬಳಗದ ವತಿಯಿಂದ ನಿರ್ಮಿಸಿದ ಶೈಕ್ಷಣಿಕ
ಕ್ರಾಂತಿಯ ಹರಿಕಾರ ಲಿಂ. ಶ್ರೀ ಸಂಗನಬಸವ
ಮಹಾಶಿವಯೋಗಿಗಳ ಹಾಗೂ ಪವಾಡ ಪುರುಷ
ಲಿಂ. ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗಳ
ಅನಾವರಣ ಕಾರ್ಯಕ್ರಮ ನೆರವೇರಿತು. ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಈ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬಂಥನಾಳ ಲಿಂ. ಶ್ರೀ ಸಂಗನಬಸವ ಮಹಾಶಿವಯೋಗಿಗಳು ತಮ್ಮ
ಪ್ರವಚನದಿಂದ ಬಂದ ಕಾಣಿಕೆಯಲ್ಲಿ ನಾಡಿನ ಎಲ್ಲೆಡೆ
ಶಾಲೆ ಕಾಲೇಜುಗಳನ್ನು ಸ್ಥಾಪಿಸಿ ಬಡವರ ಬಾಳು
ಬೆಳಗಿದ ಪೂಜ್ಯರ ಮೂರ್ತಿ ಸರ್ಕಾರಿ ಶಾಲಾ
ಆವರಣದಲ್ಲಿ ಅನಾವರಣಗೊಳ್ಳುತ್ತಿರುವದು
ಸ್ಮರಣೀಯ ಎಂದರು.
ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ
ಮಾತನಾಡಿ, ಲಿಂ. ಶ್ರೀ ಸಂಗನಬಸವ
ಮಹಾಶಿವಯೋಗಿಗಳು ಅಂದು ಬೆಳಗಿದ ಶಿಕ್ಷಣ
ಜ್ಯೋತಿ ಇಂದಿಗೂ ನಂದಾದೀಪದಂತೆ
ಬೆಳಗುತ್ತಿದೆ. ಅಂತಹ ಶರಣರು ಕಟ್ಟಿದ ಶಿಕ್ಷಣ
ಸಂಸ್ಥೆಯಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ಸ್ವಂತ
ಖರ್ಚಿನಲ್ಲಿ ಸುಂದರ ಮೂರ್ತಿ ನಿರ್ಮಿಸಿ ಅನಾವರಣಗೊಳಿಸುತ್ತಿರುವದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸ್ದಳೀಯ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಕಲಾವತಿ ಬಿರಾದಾರ, ನಿವೃತ್ತ ಶಿಕ್ಷಕ ಎಸ್.ಎಂ. ಬಿರಾದಾರ, ಮಲಕಣ್ಣಾ ವಾಲಿ, ಮಲ್ಲನಗೌಡ ಪಾಟೀಲ, ಹಣಮಂತ ಅರವತ್ತು, ಗ್ರಾಮ ಪಂಚಾಯಿತಿ ಸರ್ವಸದಸ್ಯರು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಚಿತ್ರ ಮಾಹಿತಿ ಇಂಡಿ ತಾಲ್ಲೂಕಿನ ಲಚ್ಯಾಣದ ಮೂರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲಾ ಆವರಣದಲ್ಲಿ ಲಿಂ. ಬಂಥನಾಳ ಶ್ರೀಗಳ ಮೂರ್ತಿ ಅನಾವರಣಗೊಳಿಸಲಾಯಿತು.