ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರು: ಸಂತೋಷ ಬಂಡೆ
ಇಂಡಿ: ಯೌವ್ವನದಲ್ಲೇ ಸಮಾಜಮುಖಿ ಬದುಕಾರಂಭಿಸಿ, ಕರ್ಮಯೋಗಿ, ಶಿವಯೋಗಿ, ಕಾಯಕಯೋಗಿಯಾಗಿ
ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿದ್ದ ಸಿದ್ದರಾಮರ
ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶಿವಯೋಗಿ ಸಿದ್ಧರಾಮರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಸಾಮಾಜಿಕ ಕ್ರಾಂತಿ ಮತ್ತು ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಸಮಾಜದ ಎಲ್ಲಾ ವರ್ಗದವರು ಸಿದ್ದರಾಮರ ಜೀವನ-ವಚನ-ಚಿಂತನೆಗಳನ್ನು ತಿಳಿದುಕೊಂಡು ತಮ್ಮ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಹೇಳಿದರು.
ಸಿದ್ಧರಾಮರು 12ನೇ ಶತಮಾನದಲ್ಲೇ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿ,ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಕಾಯಕ ಮತ್ತು ಜನಹಿತಾಸಕ್ತಿ ಅವರ ಬದುಕಿನ ಎರಡು ಕಣ್ಣುಗಳಾಗಿದ್ದವು. ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರಾಗಿದ್ದಾರೆ ಎಂದು ಹೇಳಿದರು.
ಹಿರಿಯ ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, 12ನೇ ಶತಮಾನದಲ್ಲಿ ಎರಡು ಅಂಕಿತನಾಮವಿರುವ ಏಕೈಕ ವ್ಯಕ್ತಿ ಶಿವಯೋಗಿ ಸಿದ್ಧರಾಮರು. ಅವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿಗಳು, ಸಾಮಾಜಿಕ ಕಳಕಳಿ, ಸರಳ ತತ್ವಗಳು ಎದ್ದು ಕಾಣುತ್ತವೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ, ಶಿಕ್ಷಕಿ ಎನ್ ಬಿ ಚೌಧರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ಥರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.


















