ರೈತರ ಜ್ವಲಂತ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಿ : ಭೀಮನಗೌಡ ಪಾಟೀಲ
ಇಂಡಿ : ಪ್ರಕೃತಿಯೂ ರೈತರಿಗೆ ತೊಂದರೆ ಕೊಡುತ್ತಿದೆ. ಅತೀವೃಷ್ಠಿ, ಅನಾವೃಷ್ಠಿ ಹೊಡೆತಕ್ಕೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ರೈತರ ಜ್ವಲಂತ ಸಮಸ್ಯೆಗಳಿವೆ. ಅದಕ್ಕೆ ರೈತರ ಗಟ್ಟಿ ಧ್ವನಿಯಾಗಿ ಸರಕಾರ ಗಮನ ಸೆಳೆಯಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಭೀಮನಗೌಡ ಪಾಟೀಲ ಹೇಳಿದರು.
ಬುಧವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಅಕ್ಕ ಮಹಾದೇವಿ ಬ್ಯಾನರ್ ಕಾರ್ಯಾಲಯದಲ್ಲಿ, ರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲೆಯ ನೂತನ ಅಧ್ಯಕ್ಷ ಎಸ್ ಬಿ ಕೆಂಬೋಗಿ ಅವರಿಗೆ “ಸ್ನೇಹ ಸಂಗಮ” ಸ್ನೇಹಿತರ ಬಳಗದಿಂದ ಸನ್ಮಾನಿಸಿ ಮಾತನಾಡಿದರು.
ಇಂದು ಬಿತ್ತನೆಯ ಬೀಜ, ಗೊಬ್ಬರದಿಂದ ಹಿಡಿದು ಮಾರುಕಟ್ಟೆಯವರೆಗೂ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಸಂಘಟನೆಯಾಗದಿದ್ದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತಿದೆ.
ಇಂದು ರೈತರು ಸಮಸ್ಯೆಗಳು ಬೆಟ್ಟದಷ್ಟು, ಬೃಹದಾಕಾರವಾಗಿ ಬೆಳೆದಿವೆ. ಅದಲ್ಲದೇ ಬೇರೆ-ಬೇರೆ ತಿರುವು ಪಡೆದು ರಾಜಕೀಯ ಸ್ವರೂಪ ಪಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡ ಪಾಪು ಕಿತಲಿ ಮಾತನಾಡಿ ರೈತರು ಇಂದು ಕೃಷಿ ಕಸುಬು ತೊರೆದು ಬೇರೆ ವೃತ್ತಿಯತ್ತ ಮುಖಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಪ್ರತಿ ವರ್ಷ ರೈತರು ಅನುಭವಿಸುತ್ತಿದ್ದಾರೆ. ರೈತರಿಗೆ ಸರಿಯಾದ ಸಮಯಕ್ಕೆ ಬೀಜ ರಸಗೊಬ್ಬರ ಮತ್ತು ಸರಕಾರದ ಸಹಾಯ ಸಹಕಾರ ಮಾರ್ಗದರ್ಶನ ಸಿಗಬೇಕು. ಅದಲ್ಲದೇ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಮತ್ತು ಕೃಷಿ ಜ್ಞಾನ ವಿಲ್ಲದ ಅನೇಕ ಅಂಗಡಿಕಾರರು ಇದ್ದಾರೆ. ಅವರಿಂದ ರೈತರಿಗೆ ಸರಿಯಾದ ಮಾರ್ಗದರ್ಶನ ಸಿಗದೆ ಬೆಳೆ ಹಾನಿ ಅನುಭವಿಸುವ ಕಷ್ಟದ ಪರಿಸ್ಥಿತಿ ಇದೆ. ಹಾಗಾಗಿ ಇಂತಹ ಎಲ್ಲಾ ಸಮಸ್ಯೆಗಳಿಗೆ ಇತೀಶ್ರಿ ಹೇಳಲು ಗಟ್ಟಿಯಾದ ರೈತ ಸಂಘಟನೆ ಅವಶ್ಯಕತೆ ಇದೆ ಎಂದು ಹೇಳಿದರು.
ಇನ್ನೋರ್ವ ಮುಖಂಡ ಮಲ್ಲಿಕಾರ್ಜುನ ವಾಲಿಕಾರ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಚುನಾವಣೆ ಬಂದಾಗ ಮಾತ್ರ ರೈತರು ನೆನಪು ಮಾಡಿಕೊಳ್ಳುತ್ತಾರೆ. ರೈತರು ಒಂದು ವೇಳೆ ಕಸುಬು ಬಿಟ್ಟು ನಿಂತರೆ ಪರಿಸ್ಥಿತಿ ಏನಾಗುತ್ತದೆ ಎಂದು ಊಹಿಸ ಕೊಂಡರೆ ಅರ್ಥವಾಗುತ್ತೆ. ಹಾಗಾಗಿ ರೈತರು ಸಂಘಟಿತರಾದಾಗ ಮಾತ್ರ ಸರಕಾರದ ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ “ಸ್ನೇಹ ಸಂಗಮ” ಸ್ನೇಹಿತರು ಮಲ್ಲಿಕಾರ್ಜುನ ಹಾವಿನಾಳಮಠ, ಶಿಕ್ಷಕ, ಸಾಹಿತಿ ಧಶರಥ ಕೋರಿ, ಪತ್ರಕರ್ತ ಶಂಕರ್ ಜಮಾದಾರ ಹಾಗೂ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.