ಲಿಂಗಸೂಗೂರು: ರಾತ್ರಿ ವೇಳೆಯಲ್ಲಿ ಶ್ರೀಗಂಧದ ಮರಗಳನ್ನು ಕಡೆದು ಬೇರೆಡೆ ಸಾಗಾಟ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಕ್ಯಾಂಪಿನ ಅಧಿಸೂಚಿತ ಪ್ರದೇಶವಾದ ಲೋಟಸ್ ಕಾಲೋನಿಯ ಮನೆ ನಂ 17 ಮತ್ತು 7 ರ ಮನೆಯ ಹಿತ್ತಲಲ್ಲಿ ಬೆಳೆದ ಗಂಧದ ಮರಗಳನ್ನು ಕಡಿದು ಕಳ್ಳರು ಕಳ್ಳತನ ಮಾಡಿದ್ದರು.
ಈ ಹಿನ್ನಲೆಯಲ್ಲಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿದ್ದರು. ಆರೋಪಿಗಳಿಂದ ₹ 6,72,370 ಬೆಲೆ ಬಾಳುವ ಶ್ರೀಗಂಧದ ತುಂಡುಗಳು, ಕಳ್ಳತನಕ್ಕೆ ಬಳಸಿದ ಮೂರು ಗರಗಸಗಳು, ಒಂದು ಇಂಡಿಕಾ ಕಾರು, ಒಂದು ಬೈಕ್ ವಶಪಡಿಕೊಂಡಿದ್ದಾರೆ. ಇನ್ನು ಆರೋಪಿಗಳಾದ ಮಾರುತಿ ಅರಿಣಿಕಾರಿ, ರಾಮಣ್ಣ ಅರಿಣಿಕಾರಿ, ಬಂದೇನವಾಜ್ ಶಿವನಗುತ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.