ರಾಯಚೂರು: ಬ್ರಹ್ಮ ಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಿ ಸುಮಾರು ೫೦೦ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕೆಂದು ತಾಲೂಕು ಆರ್ಯ ಈಡಿಗರ ಸಂಘ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆಯನ್ನು ಗಣನೆಗೆ ತೆಗೆದು ಕೊಂಡರೆ ಆರ್ಯ ಈಡಿಗ ಹಾಗೂ ೨೫ ಉಪ ಪಂಗಡಗಳಿಂದ ಸುಮಾರು ೫೦ ಲಕ್ಷಕ್ಕು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅತಿ ದೊಡ್ಡ ಸಮಾಜವಾಗಿ ಆರ್ಯ ಈಡಿಗ ಸಮಾಜವು ಗುರುತಿಸಿಕೊಂಡಿದೆ. ಸಮಾಜದ ಕುಲ ಕಸುಬಾದ ಸೇಂದಿ ಹಾಗೂ ಸಾರಾಯಿ ಉದ್ಯಮವನ್ನು ಸರಕಾರ ನಿಷೇದ ಮಾಡಿದ್ದರಿಂದ ಅದನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ಹಾಗೂ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು ಸಹ ಸರಕಾರಗಳು ಯಾವುದೇ ಪುನರ್ ವಸತಿ, ಉದ್ಯೋಗ ಅವಕಾಶ, ಪರಿಹಾರ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ.
ಆದ್ದರಿಂದ ನಮ್ಮ ಸಮಾಜದ ಮುಖಂಡರು ಹಲವಾರು ವರ್ಷಗಳಿಂದ ಸಮಾಜದ ನಿಗಮ ಮಂಡಳಿಯನ್ನು ಸ್ಥಾಪಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಹಸ್ತ ನೀಡಲು ಮನವಿ ಮಾಡಿದರು ಸಹ ನಮ್ಮ ಬೇಡಿಕೆ ಈಡೇರಿಲ್ಲ. ಮುಂದಿನ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಕುರಿತು ಚರ್ಚಿಸಿ ನಮ್ಮ ಸಮಾಜಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ೫೦೦ ಕೋಟಿ ಬಿಡುಗಡೆ ಗೊಳಿಸಿ ನಿರಾಶ್ರಿತರಿಗೆ ಪುನರ್ ವಸತಿ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ಸ್ವಯಂ ಉದ್ಯೋಗ ಪ್ರೋತ್ಸಾಹ ನೀಡಿ ನಾರಾಯಣ ಗುರುಗಳ ಸಂದೇಶದ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡುವುದು, ನಮ್ಮ ಸಮಾಜದ ಉಳುವಿಗಾಗಿ ಮುಖ್ಯಮಂತ್ರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ನಮ್ಮ ಜನಾಂಗಕ್ಕೆ ಸಹಾಯಹಸ್ತ ನೀಡಬೇಕು ಒತ್ತಾಯಿಸಿದರು.