ರೈತರಿಗೆ ಎಪ್ ಆರ್ ಪಿ ದರಕ್ಕಿಂತ ಹೆಚ್ಚಿನ ದರ ನೀಡಲಾಗಿದೆ : ಶಾಸಕ ಯಶವಂತರಾಯಗೌಡ ಪಾಟೀಲ
ರೈತರ ಕಾರ್ಖಾನೆ, ರಾಜಕೀಯ ಬೇರಿಸಬೇಡಿ : ಶಾಸಕ ಪಾಟೀಲ
ಇಂಡಿ : ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ವರ್ಷದಲ್ಲಿಯೇ ೧೮೮ ಕೋಟಿ ವೆಚ್ಚದಲ್ಲಿ ಇಥಿನಾಲ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವದು. ಬರುವ ಡಿಸೆಂಬರ್ ತಿಂಗಳಲ್ಲಿಯೇ ಅದು ಕಾರ್ಯಾರಂಭ ಪಾಡಲಿದೆ. ಇದರ ಉದ್ಘಾಟನೆಗೆ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯ ಮಂತ್ರಿಗಳನ್ನು ಹಾಗೂ ಸಹಕಾರಿ ರಂಗಕ್ಕೆ ಸೇರಿದ ಎಲ್ಲಾ ಸಚಿವರನ್ನು ಕರೆಸಲಾಗುವದು ಎಂದು ಶಾಸಕ ಮತ್ತು ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ಇಂಡಿ ತಾಲ್ಲೂಕಿನ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಿದ್ದ ೬ನೇ ವರ್ಷದ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ೨೦೧೭-೨೦೧೮ ರಲ್ಲಿ ಪ್ರಾರಂಭವಾದ ಈ ಕಾರ್ಣಾನೆಗೆ ಕಬ್ಬು ಕಳಿಸಿದ ರೈತರಿಗೆ ಕೇಂದ್ರ ಸರ್ಕಾರದ ಎಪ್ ಆರ್ ಪಿ ದರಕ್ಕಿಂತ ಹೆಚ್ಚಿನ ದರ ನೀಡಲಾಗಿದೆ. ಕಳೆದ ೬ ವರ್ಷಗಳಲ್ಲಿ ೫೨೫೮೮೦೭೮೯ (೫೨ ಕೋಟಿ, ೫೮ ಲಕ್ಷ, ಎಂಬತ್ತು ಸಾವಿರ, ಏಳುನೂರಾ ಎಂಬತ್ತುರೊAಬತ್ತು) ಹಣವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇಲ್ಲಿಯವರೆಗೆ ರೈತರ ಬಿಲ್ಲಿನ ಯಾವದೇ ಹಣ ಬಾಕಿ ಉಳಿಸಿಕೊಂಡಿಲ್ಲ ಮತ್ತು ಕಾರ್ಖಾನೆ ಕಟ್ಟಲು ವಿವಿಧ ಬ್ಯಾಂಕುಗಳಿಂದ ಪಡೆದುಕೊಂಡಿರುವ ಸಾಲದ ಗಂಟು ಮತ್ತು ಬಡ್ಡಿ ಸಮೇತ ಕಟ್ಟುತ್ತ ಬಂದಿದ್ದೇವೆ. ಯಾವದೇ ಬಾಕಿ ಉಳಿಸಿಕೊಂಡಿಲ್ಲ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದೇವೆ ಎಂದರು.
ಕಾರ್ಖಾನೆ ಪ್ರತೀ ವರ್ಷ ಕನಿಷ್ಟ ೫.೫ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಬೇಕು. ಆದರೆ ಅಷ್ಟು ನುರಿಸುವದು ಕಷ್ಟವಾಗುತ್ತಿದೆ. ಕಾರಣ ರೈತರು ಇನ್ನು ಮುಂದೆಯಾದರೂ ಕಾರ್ಖಾನೆಗೆ ಹೆಚ್ಚಿನ ಮತ್ತು ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಕಳೆದ ೧೦೦ ವರ್ಷಗಳ ಸರ್ವೇ ಪ್ರಕಾರ ನಮ್ಮ ಭಾಗದಲ್ಲಿ ಅತೀ ಕಡಿಮೆ ಮಳೆಯಾಗಿದೆ. ಇದನ್ನು ಅರಿತ ಸರ್ಕಾರ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ೩೦೦೦ ಸಾವಿರ ಕೋಟಿ ರೂ, ಅನುದಾನ ನೀಡಿದೆ. ಬರುವ ೨ ವರ್ಷಗಳಲ್ಲಿ ಅದರ ಕಾಮಗಾರಿ ಪಪೂರ್ಣಗೊಳ್ಳಲಿದೆ. ಇದರಿಂದ ಇಂಡಿ, ಸಿಂದಗಿ ಮತ್ತು ಚಡಚಣ ತಾಲ್ಲೂಕುಗಳು ಸಂಪೂರ್ಣ ನೀರಾವರಿಯಾಗಲಿವೆ ಎಂದರು.
ಇದು ರೈತರ ಕಾರ್ಖಾನೆಯಾಗಿದ್ದು, ಇದರಲ್ಲಿ ಯಾರೂ ರಾಜಕೀಯ ಬೆರೆಸಬೇಡಿ ಎಂದು ಮನವಿ ಮಾಡಿಕೊಂಡ ಅವರು ಕಾರಖಾನೆಯ ಸೇರುದಾರರು ಕೊಡುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುವದಾಗಿ ಭರವಸೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಪ್ರತೀ ಶೇರುದಾರರಿಗೆ ೨೫ ಕಿಲೋ ಸಕ್ಕರೆಯನ್ನು ಅರ್ಧ ದರದಲ್ಲಿ ನೀಡಲಾಗುವದಾಗಿ ತಿಳಿಸಿದರು.
ಎಂ.ಆರ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಖಾನೆಯ ನಿರ್ದೇಶಕರಾದ ವಿಶ್ವನಾಥ ಬಿರಾದಾರ, ಬಿ.ಎಂ. ಕೋರೆ, ಸಿದ್ದಣ್ಣ ಬಿರಾದಾರ, ಜೆಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪ ಪಾಟೀಲ, ಬಸವರಾಜ ಧನಶ್ರೀ, ಲಲಿತಾ ನಡಗೇರಿ, ಸರೋಜನಿ ಪಾಟೀಲ, ವಿಶ್ವನಾಥ ಬಿರಾದಾರ, ದುಂಡಪ್ಪ ಖೇಡ, ಎಂಡಿ ಎಸ್.ಕೆ. ಭಾಗ್ಯಶ್ರೀ ಇದ್ದರು.
ಸಭೆಯಲ್ಲಿ ಸಹಕಾರಿ ರತ್ನ ಶ್ರೀಮಂತ ಇಂಡಿ, ರೈತ ಮುಖಂಡ ಗುರುನಾಥ ಬಗಲಿ, ಶರಣಗೌಡ ಪಾಟೀಲ, ಎಸ್.ಬಿ.ಬೂದಿಹಾಳ ಮಾತನಾಡಿ, ಕಾರ್ಖಾನೆಯ ಸ್ಥಳದಲ್ಲಿ ರೈತ ಸಮ್ಮೇಳನಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.
ಇಂಡಿ: ತಾಲ್ಲೂಕಿನ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಖಾನೆಯ ೬ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯನ್ನು ಕಾರ್ಖಾನೆಯ ಅಧ್ಯಕ್ಷ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.