ರಾಯಚೂರು: ಅಂಗನವಾಡಿ ಕೇಂದ್ರಗಳನ್ನು ಎಲ್.ಕೆ.ಜಿ.ಯು.ಕೆ.ಜಿ. ಕೇಂದ್ರಗಳಾಗಿ ಪರಿವರ್ತಿಸಿ, ನೌಕರರಿಗೆ ಸೇವಾ ಜೇಷ್ಠತೆ ಅಧಾರದ ಮೇಲೆ ವೇತನ ಪದ್ಧತಿ ಜಾರಿಗೆಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಹೊಸ ಶಿಕ್ಷಣ ನೀತಿನ್ನು ಕೂಡಲೇ ಕೈ ಬಿಡಬೇಕು.ಅಂಗನವಾಗಿ ಕೇಂದ್ರಗಳನ್ನು ಗ್ರಾಮ ಪಂಚಾಯತಿಗೆ ಸುಪರ್ದಿ ವಹಿಸುವುದನ್ನು ಕೈಬಿಡಬೇಕು.ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್.ಕೆ.ಜಿ.-ಯು.ಕೆ.ಜಿ. ಶಿಕ್ಷಣ ನೀಡಬೇಕು . ಸಮಾಜ ಬದಲಾವಣೆಯನ್ನು ಬಯಸುತ್ತಿದೆ . ಆದರೆ ಅಂಗನವಾಡಿ ಕೇಂದ್ರಗಳು ಮಾತ್ರ ಹಳೆಯ ರೀತಿಯಲ್ಲಿಯೇ ಕಾರ್ಯಚರಿಸುತ್ತಿವೆ . ಬದಲಾದ ಸಮಾಜದ ರೀತಿಯಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಆದ್ದರಿಂದ ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು. ಅಂಗನವಾಡಿ ಕೇಂದ್ರ ವೇಳಾ ಪಟ್ಟಿಯಲ್ಲಿ ೩ ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನೊದಗಿಸಬೇಕು.೧೯೯೫ ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ ಪಾಸಾದವರು ಅನೇಕರು ಪಧವೀದರರು ಇರುವುದರಿಂದ ಅವರಿಗೆ ತರಬೇತಿಯನ್ನು ಕೊಟ್ಟು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ.ಯು.ಕೆ.ಜಿ.ಯನ್ನು ಪ್ರಾರಂಭಿಸಬೇಕು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗುತ್ತಿರುವ ಮತ್ತು ಪ್ರಾರಂಭವಾಗಿರುವ ಎಲ್.ಕೆ.ಜಿ. ಯು.ಕೆ.ಜಿ.ಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೂಡಲೇ ವಹಿಸಬೇಕು.ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ ಉದ್ದೇಶಗಳಿಗೆ ಬಿಟ್ಟು ಉಳಿದ ಹೆಚ್ಚುವರಿ ಕೆಲಸ ನಿರ್ಬಂಧಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ ೩ ರಿಂದ ೮ ವರ್ಷದ ವರ್ಗೀಕರಣವನ್ನು ಕೈ ಬಿಡಬೇಕು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸು ಮಾಡಿರುವ ೩೩೯. ೪೮ ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಕೊರೋನಾ ಸಂದರ್ಭದಲ್ಲಿ ನಿಧನರಾದ ಕುಟುಂಬದವರಿಗೆ ಮಗಳು ಇಲ್ಲದಿದ್ದಾಗ ಸೊಸೆಗೆ ಅವರ ಹುದ್ದೆ ಕೊಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡುವಾಗ ಮಗಳು ಬದಲಿಗೆ ಸೊಸೆ ಎಂದು ಬದಲಿಸಬೇಕು. ಕೋಳಿ ಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪದ್ಮ,ಪಾರ್ವತಿ,ಕೆ.ಜಿ ವೀರೇಶ್,ಡಿ.ಎಸ್.ಶರಣಬಸವ,ಗೋಕರಮ್ಮ,ಗಂಗಮ್ಮ,ಈಶ್ವರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.