ವಿಜಯಪುರ : ಬರುವ ಮೇ 18ರ ಒಳಗಾಗಿ ಹೊಸ ವಿಧಾನ ಸಭೆ ರಚನೆಯಾಗಬೇಕು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು.
ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಾರ್ಚ್ ಕೊನೆಯ ವಾರ ಚುನಾವಣೆ ಘೋಷಣೆಯಾಗಲಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ.
ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸಲಾಗುತ್ತಿದೆ ಎಂದರು.
ಇನ್ನೂ ವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನಲ್ಲಿ ಚುನಾವಣೆ ಪ್ರಚಾರ ಮಾಡಲಾಗುತ್ತಿದೆ. ಫೆಬ್ರವರಿ 3 ರಿಂದ ಎರಡು ತಂಡಗಳು ರಾಜ್ಯದಲ್ಲಿ ಪ್ರವಾಸ ಮಾಡಲಿವೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಸವ ಕಲ್ಯಾಣದಿಂದ ಯಾತ್ರೆ ಆರಂಭವಾಗಲಿದೆ.
112 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ವಿಜಯಪುರ ಜಿಲ್ಲೆಯ ಫೆಬ್ರುವರಿ 11 ರಂದು ಪ್ರಜಾಧ್ವನಿ ಯಾತ್ರೆ ಆಗಮಿಸಲಿದೆ. ಸಿಂದಗಿ, ಇಂಡಿ, ನಾಗಠಾಣ ಕ್ಷೇತ್ರದಲ್ಲಿ ನಡೆಯಲಿದೆ. 12ಕ್ಕೆ ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿಯಲ್ಲಿ ಯಾತ್ರೆ ನಡೆಯಲಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಫೆಬ್ರವರಿ 21 ನೇ ತಾರೀಖು ಯಾತ್ರೆ ನಡೆಯಲಿದೆ ಎಂದರು.
ಅಲ್ಲದೇ, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನ ವಿಚಾರದಲ್ಲಿ ನಮ್ಮ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವ ಇದೆ. ಶಾಸಕಾಂಗ ಪಕ್ಷದ ನಾಯಕನಾದ ಬಳಿಕ ಯಾರು ಸಿಎಂ ಎಂದು ನಿರ್ಧಾರ ಮಾಡುತ್ತಾರೆ. ಹೈಕಮಾಂಡ್ ಇದನ್ನು ನಿರ್ಧಾರ ಮಾಡುತ್ತದೆ. ಚುನಾವಣೆಗೂ ಮುನ್ನ ಸಿಎಂ ಘೋಷಣೆ ನಮ್ಮಲ್ಲಿ ಇಲ್ಲ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಯಾರು ಬೇಕಾದರೂ ಹೇಳಬಹುದು, ಆದರೆ ಪಕ್ಷ ಅದನ್ನು ನಿರ್ಧಾರ ಮಾಡುತ್ತದೆ ಎಂದರು.