ಕಲಬುರಗಿ : ಉದ್ಯಮಿ ಆಗು- ಉದ್ಯೋಗ ನೀಡು ಕಾರ್ಯಕ್ರಮದ ಮೂಲಕ ಈ ಭಾಗದ ಅಭಿವೃದ್ದಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ಹೇಳಿದರು.
36ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ನಗರದ ಅಪ್ಪನ ಕೆರೆ ರಸ್ತೆಯ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಲಾದ ಬ್ಯಾಂಡ್ ಕಲಬುರಗಿ (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಮಂಥನ) ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಹೆಚ್ಚಿನ ಉದ್ಯಮಗಳನ್ನು ಇಲ್ಲಿ ತರಲು ಸರ್ವ ಪ್ರಯತ್ನ ನಡೆದಿದೆ. ಇದರ ಭಾಗವಾಗಿ ಇಂದು ಉದ್ಯಮಿ ಆಗು-ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಯಮಿಗಳು ಸರ್ಕಾರದ ಸೌಲಭ್ಯಗಳು ಪಡೆದುಕೊಂಡು ಉದ್ಯೊಗ ಸೃಜನೆಗೆ ಒತ್ತು ನೀಡಬೇಕೆಂದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸೇಡಂ ಮಾತಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಈ ಭಾಗದ ಯುವಕರು ಮುಂದೆ ಬರಬೇಕು.
ಮುಂಬರುವ 5 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸುಸಂಸ್ಕೃತ ವಾತವಾರಣ ನಿರ್ಮಾಣವಾಗಲಿದೆ. ಶರಣ ಹಾಗೂ ಸಂತರ ಮಾರ್ಗದರ್ಶನದಲ್ಲಿ ಈ ಭಾಗ ಬೆಳವಣಿಗೆಯಾಗಲಿದ್ದು, ಇಡೀ ದೇಶಕ್ಕೆ ಬೆಳಕು ನೀಡುವ ನಾಡಾಗಲಿದೆ. ಕಲ್ಯಾಣ ಕರ್ನಾಟಕ ಬಿಟ್ಟು ಕರ್ನಾಟಕ ಊಹಿಸಲು ಅಸಾಧ್ಯ ಎಂದರು.
ಸಾಧಕರಿಗೆ ಸನ್ಮಾನ;
ಕಲಬುರಗಿಯ ಕೀರ್ತಿ ಪತಾಕೆಯನ್ನು ದೇಶ-ವಿದೇಶದಲ್ಲಿ ಸಾರಿದ ಕಲಬುರಗಿ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಮುತ್ಯಾನ್ ಬಬಲಾದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಪಾದಲಿಂಗೇಶ್ವರ ಸ್ವಾಮಿಗಳು, ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ಶರಣಬಸಪ್ಪ ಅಪ್ಪ ಅವರ ಪರವಾಗಿ ಬಸವರಾಜ ದೇಶಮುಖ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಸ್.ಹಲ್ಸೆ, ಭೌತಶಾಸ್ತ್ರದ ಪ್ರಾಧ್ಯಾಪಕ ಡಾ.ಎಂ.ಎಸ್.ಜೋಗದ್, ಉದ್ಯಮಿ ರಾಘವೇಂದ್ರ ಮೈಲಾಪೂರ, ಯುವ ಸಿ.ಎ. ಪ್ರಶಾಂತ ಬಿಜಾಸಪೂರ, ತೊಗರಿಗೆ ಜಿ.ಐ.ಟ್ಯಾಗ್ ದೊರಕಿಸಲು ಕಾರಣಿಭೂತರಾದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗಳ್ಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕತ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ. ಮಾಮು ಮಾಲ್ ಪೂರಿ ಖ್ಯಾತಿಯ ಮಹಮ್ಮದ ರಫೀಕ್ ಅವರಿಗೆ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಗಣ್ಯರು ಸತ್ಕರಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಎಂ. ಠಾಕೂರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ತಿನ ಶಾಸಕ ಡಾ.ಬಿ.ಜಿ.ಪಾಟೀಲ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಶಿಕಲಾ ವಿ. ಟೆಂಗಳಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ್,
ಬೆಂಗಳೂರಿನ ಇಂಡಿಯನ್ ಎಕ್ಸ್ಪ್ರೆಸ್ ಸಹಾಯಕ ಸಂಪಾದಕ ಪಿ. ರಾಮು ಪಾಟೀಲ, ಹಿರಿಯ ಪತ್ರಕರ್ತರಾದ ಡಾ. ಓಂಕಾರ ಕಾಕಡೆ, ಕನ್ನಡ ಪ್ರಭ ಪತ್ರಿಕೆಯ ಶೇಷಮೂರ್ತಿ ಅವದಾನಿ, ಉದಯವಾಣಿ ಸ್ಥಾನಿಕ ಸಂಪಾದಕ ಹಣಮಂತರಾಯ ಭೈರಾಮಡಗಿ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಗಣೇಶ ಚಂದನಸಿವಾ ಇದ್ದರು. ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಪತ್ರಿಕೆಗಳ ಸಂಪಾದಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಬುರಗಿಯ ನಾಟ್ಯಂಜಲಿ ಕಲಾ ಮಕ್ಕಳಿಂದ ಶಾಸ್ತ್ರೀಯ ಸಂಗೀತದ ನೃತ್ಯ ಮತ್ತು ಮಾತೃ ಕಲಾ ಮಂದಿರದ ಮಕ್ಕಳು“ಬಾರಯ್ಯ ಬಾ” ಜಾನಪದ ನೃತ್ಯ ಸಭಿಕರ ಮನಸೊರೆಗೊಳಿಸಿತು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ಸ್ವಾಗತಿಸಿದರು.