ರಾಯಚೂರು: ಆತ್ಮರಕ್ಷಣೆಗಾಗಿ ಹಾಗೂ ಸಮಾಜದ ರಕ್ಷಣೆಗಾಗಿ ಕರಾಟೆ ಕಲೆಯನ್ನು ಕಲಿಸಲಾಗುತ್ತದೆ. ಆತ್ಮ ರಕ್ಷಣೆಯ ವಿಷಯ ಬಂದಾಗ ಯಾವುದೇ ಭಯವಿಲ್ಲದೆ ಕರಾಟೆ, ಕಲ್ಲು, ಎಲ್ಲವನ್ನು ತೆಗೆದುಕೊಂಡು ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಮನಸ್ಸನ್ನು ಹಾಗೂ ದೇಹವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಕರಾಟೆ ಮುಖ್ಯ, ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಸೇವಿಸಿ ಶಕ್ತಿವಂತರಾಗಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್. ಬಿ ಅವರು ಹೇಳಿದರು.
ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಶಾಪುರ ರಸ್ತೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ ರಕ್ಷಣೆಗಾಗಿ ಓಬವ್ವ ಆತ್ಮರಕ್ಷಣಾ ಕಲಾ ಕರಾಟೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿಗಳು ಒಂದು ಕಾಲದಲ್ಲಿ ಕರಾಟೆ ಗಂಡಸರಿಗಷ್ಟೇ ಸೀಮಿತವಾಗಿತ್ತು ಆದರೆ ಇಂದು ಎಲ್ಲರಿಗೂ ಕರಾಟೆ ಕಲಿಯಲು ಅವಕಾಶ ಸಿಕ್ಕಿರುವುದು ನಿಮ್ಮ ಪುಣ್ಯ, ಓಬವ್ವ ನನ್ನ ಆದರ್ಶವಾಗಿದ್ದಾರೆ ನಾನು ಚಿತ್ರದುರ್ಗ ಜಿಲ್ಲೆಯಿಂದ ಬಂದಿರುವುದರಿಂದ ನನಗೂ ಅವರು ಜೀವನದಲ್ಲಿ ಮಾರ್ಗದರ್ಶಕರಾಗಿದ್ದಾರೆ.
ಇಂತಹ ಕಾರ್ಯಕ್ರಮಗಳು ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಮುಂದುವರೆಯಬೇಕು, ನಾನು ಕೂಡ ಕರಾಟೆ ಪಟುವಾಗಿದ್ದೇನೆ ಕರಾಟೆ ನಮ್ಮ ಜೀವನದಲ್ಲಿ ಪೂರ್ವಕವಾಗಿರಬೇಕು ಮತ್ತು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಮಕ್ಕಳಿಗೆ ಪ್ರೋತ್ಸಾಹ ಮತ್ತು ಕರಾಟೆಯ ವಿಧಾನಗಳ ಕುರಿತು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ.ಅವಿನಾಶ್ ಮೆನನ್ ಇಂತಹ ಕಾರ್ಯಕ್ರಮಕ್ಕೆ ಬಂದಿರೋದು ನನಗೆ ತುಂಬಾ ಸಂತೋಷವಾಗುತ್ತದೆ ಕರ್ನಾಟಕದ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಕರಾಟೆ ಕಲಿಸುವಂತಹ ಕೆಲಸ ಉತ್ತಮ ಕಾರ್ಯಕ್ರಮವಾಗಿದೆ. ಹೆಣ್ಣುಮಕ್ಕಳು ನಿರಂತರ ಕರಾಟೆಯನ್ನು ಅಭ್ಯಾಸಮಾಡಿ ನಮ್ಮ ಹೆಣ್ಣುಮಕ್ಕಳು ತಮ್ಮ ರಕ್ಷಣೆಯನ್ನು ಸ್ವಯಂ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಎಲ್ಲರೂ ಶ್ರದ್ಧೆಯಿಟ್ಟು ಅಭ್ಯಾಸಮಾಡಿ ಕರಾಟೆಯ ಆರೋಗ್ಯಕ್ಕೆ ಬಹಳ ಸಹಕಾರಿಯಾಗಲಿದೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರೀಡಾಂಗಣ ಹಸಿರು ಮಾಡಲು ಜಿಲ್ಲಾಡಳಿತದಿಂದ ಪ್ರಯತ್ನ ಮಾಡುತ್ತೇನೆ. ಮನ,ಪ್ರಾಣ,ರಕ್ಷಣೆಗೆ ಕರಾಟೆ ಕಲಿಯುವುದು ಅವಶ್ಯಕ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸತೀಶ್ ಹೆಚ್. ಕೆ. ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾಧಿಕಾರಿಗಳಾದ ಬಿಲಾಲ್ ಎಂ.ಜಿ. ಪ್ರಾಂಶುಪಾಲರಾದ ದಾವಲ್ ತೆರೆದಾಳ, ತರಬೇತುದಾರರಾದ ಮಹಾನಂದ, ಲಕ್ಷ್ಮಿ,ಮಂಜುಳಾ, ತಾಲೂಕು ಅಧಿಕಾರಿಗಳು, ಮುರಾರ್ಜಿ ದೇಸಾಯಿ ಶಾಲೆಯ ಮಕ್ಕಳು, ಮೊರಾರ್ಜಿ ದೇಸಾಯಿ ಸಿಂಗನೋಡಿ ಶಾಲೆಯ ಮಕ್ಕಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.