ಸಿಂಧನೂರು: ತಾಯಿ ಮಕ್ಕಳ ಹೆರಿಗೆ ಆಸ್ಪತ್ರೆ ಗುದ್ದಲಿ ಪೂಜೆ ಮಾಡಿದ್ದು, ಈ ಆಸ್ಪತ್ರೆ ತಾಲೂಕಿನ ತಾಯಂದಿರು ಸದುಪಯೋಗ ಮಾಡಿಕೊಳ್ಳಬೇಕೆಂದು ಮಾಜಿ ಮಂತ್ರಿ ಹಾಗೂ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಹೇಳಿದರು. ನಗರದ ಕಲ್ಲೂರು ಗ್ರಾಮದಲ್ಲಿ ೧೨೦೦ ಲಕ್ಷ ರೂ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆಗೆ ಗುದ್ದಲಿ ಪೂಜೆ ಹಾಗೂ ನಬಾರ್ಡ್ ಯೋಜನೆಯಡಿಯಲ್ಲಿ ಕಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಹೆರಿಗೆಯಾಗುವುದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಎಂದರು. ತಾಯಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕಲ್ಲೂರಿನಲ್ಲಿ ಆಸ್ಪತ್ರೆಯ ಭೂಮಿ ಪೂಜೆ ಮಾಡಿದ್ದು ೧೮ ತಿಂಗಳೊಳಗಾಗಿ ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತೆ ಸ್ಥಳದಲ್ಲಿದ್ದ ಗುತ್ತೆದಾರರು ಮತ್ತು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸಿಂಧನೂರು ತಾಲೂಕಿನಲ್ಲಿ ಜನಸಂಖ್ಯೆ ಒತ್ತಡದಲ್ಲಿ ಕೆಲಸ ಆಗುತ್ತಿಲ್ಲ ಎಂಬ ಸಾರ್ವಜನಿಕರ ಆರೋಪ ವಿದ್ದು, ತಾಯಿ ಮಕ್ಕಳ ಆಸ್ಪತ್ರೆ ಇಲ್ಲಿ ಕಟ್ಟಲು ಭೂಮಿ ಪೂಜೆಯ ನಂತರ ಆಸ್ಪತ್ರೆ ನಿರ್ಮಾಣವಾದ ಮೇಲೆ ಮೂರ್ನಾಲ್ಕು ಜನ ತಾಯಿ – ಮಕ್ಕಳ ವೈದ್ಯರು, ಪಿಜಿಸಿಯನ್, ತಜ್ಞ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಅವರಿಗೆ ವಸತಿ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಇದರಿಂದ ತಾಯಿ ಮಕ್ಕಳಿಗೂ ಸಹ ಅನುಕೂಲವಾಗಲಿದೆಂದು ತಿಳಿಸಿದರು. ನಗರದ ವಿವಿಧ ವಾರ್ಡಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳು ಮತ್ತು ಗಾಂಧಿನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಏತ ನೀರಾವರಿ ಯೋಜನೆಗೆ ಒತ್ತು ನೀಡಲಾಗುತ್ತಿದ್ದು, ಇದರಿಂದ ಹರಿದು ಹೋಗುವ ನೀರನ್ನು ತಡೆದು ರೈತರಿಗೆ ನೀಡಿದರೆ ರೈತರ ಬದುಕು ಹಸನಾಗುತ್ತದೆ. ಈ ಬಾರಿಯ ಬೇಸಿಗೆ ಬೆಳೆಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕಾಲುವೆಗೆ ನೀರು ಬಿಡಲಾಗುತ್ತದೆ. ಇದರಿಂದ ರೈತರು ಆತಂಕಕ್ಕೆಗೊಳಪಡಬೇಡಿ. ಕುಡಿಯುವ ನೀರನ್ನು ಮಿತವಾಗಿ ಬಳಸಿ ವ್ಯರ್ಥವಾಗಿ ರಸ್ತೆಗೆ ನೀರನ್ನು ಬಿಡಬೇಡಿ ಎಂದ ಅವರು, ಎರಡು ವರ್ಷದಲ್ಲಿ ೫೦೦ ಶಾಲಾ ಕೋಠಡಿಗಳನ್ನು ಕಟ್ಟಿಸಿದ್ದು, ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿ ವಿಧ್ಯಾಭ್ಯಾಸ ನೀಡಿದರೆ ಮಕ್ಕಳೆ ನಿಮಗೆ ಮುಂದೆ ಆಸ್ತಿಗಳಾಗುತ್ತಾರೆಂದರು. ಕೊಪ್ಪಳ ಸಂಸದ ಸಂಗಣ್ಣ ಕರಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಜೆಡಿಎಸ್ , ಬಿಜೆಪಿ ಪಕ್ಷದ ಮುಖಂಡರಾದ ವೆಂಕೋಬಗೌಡ ಕಲ್ಲೂರು, ವೆಂಕಟೇಶ ನಂಜಲದಿನ್ನಿ, ಶಂಕರಗೌಡ ಎಲೆಕೂಡ್ಲಿಗಿ, ಧರ್ಮನಗೌಡ, ವೀರೇಶ ಈಲ್ಲೂರು, ಚಂದ್ರಶೇಖರ ಮೈಲಾರ, ಸಿದ್ರಾಮೇಶ ಮನ್ನಾಪುರ, ಅಯ್ಯನಗೌಡ ಆಯನೂರು, ಜಕ್ಕರಾಯ, ಬಿಇಒ ಶರಣಪ್ಪ ವಟಗಲ್, ಎಇಇ ಸಿ.ಎಸ್.ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಇಇ ವಿಶ್ವನಾಥ ರೆಡ್ಡಿ ನಾಯಕಲ್, ಗುತ್ತೆದಾರ ಅಬೀಬ್, ಪ್ರಶಾಂತ ಕಿಲ್ಲೆದ, ಮಲ್ಲಿಕಾರ್ಜುನ ಜಿನೂರು, ನಗರಸಭೆ ಪೌರಾಯುಕ್ತರಾದ ಆರ್.ವಿರುಪಾಕ್ಷಿಮೂರ್ತಿ ಸೇರಿದಂತೆ ಇನ್ನಿತರರು ಮುಖಂಡರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.