ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪೊಲೀಸ್ ಇಲಾಖೆಯಲ್ಲಿ ೩೨ ವರ್ಷಗಳ ಸುಧೀರ್ಘ ಸೇವೆಯ ನಂತರ ಎಎಸೈ ಹುದ್ದೆಗೆ ಪದೋನ್ನತಿ ಹೊಂದಿ ಸೇವೆಯಿಂದ ನಿವೃತ್ತರಾದ ಬಿ.ಡಿ.ಪವಾರ ಅವರಿಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ಹೃದಯಸ್ಪರ್ಶಿ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಪತ್ನಿ ಗಿರಿಜಾ ಅವರೊಂದಿಗೆ ಠಾಣೆಗೆ ಬಂದಿದ್ದ ಪವಾರ ಅವರನ್ನು ಪಿಎಸೈ ಸಂಜಯ್ ತಿಪ್ಪರಡ್ಡಿ ಮತ್ತು ಠಾಣೆಯ ಎಲ್ಲ ಸಿಬ್ಬಂದಿಗಳು ಪುಷ್ಪವೃಷ್ಟಿ ಮೂಲಕ ವಿಶೇಷ ಗೌರವ ತೋರಿದರು. ಕಚೇರಿ ಒಳಗಿನಿಂದ ಪ್ರವೇಶದ್ವಾರದವರೆಗೂ ದಂಪತಿ ಮೇಲೆ ಹೂವಿನ ದಳಗಳನ್ನು ಸುರಿದು ಸಂಭ್ರಮಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪವಾರ ಅವರು ಕಾನ್ಸಟೇಬಲ್ ತರಬೇತಿಯ ನಂತರ ಮೊದಲ ಕರ್ತವ್ಯಕ್ಕೆ ಹಾಜರಾಗಿದ್ದು ಮುದ್ದೇಬಿಹಾಳ ಠಾಣೆಗೆ ನಂತರ ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ, ಸಿಂದಗಿ ಮುಂತಾದೆಡೆ ಸೇವೆ ಸಲ್ಲಿಸಿ ಅಂತಿಮವಾಗಿ ಎಎಸೈ ಪದೋನ್ನತಿ ಹೊಂದಿ ಮುದ್ದೇಬಿಹಾಳ ಠಾಣೆಯಲ್ಲೇ ಸೇವಾ ನಿವೃತ್ತಿ ಹೊಂದುತ್ತಿರುವುದು ಸುದೈವ. ಕೃಷಿಕನಾಗಿ, ಹಿರಿಯ ನಾಗರಿಕನಾಗಿ ನಿವೃತ್ತಿ ಜೀವನ ನಡೆಸುತ್ತೇನೆ ಎಂದರು. ಈ ಸಂದರ್ಭ ಠಾಣೆಯ ಎಲ್ಲ ಸಿಬ್ಬಂದಿ ಪವಾರ ದಂಪತಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.