ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಮಹೋತ್ಸವ ನಡೆಯಿತು.
ಸಂಸ್ಕೃತಿ ಹಾಗೂ ಸ್ಚಚ್ಚತೆ ಸಂಗಮದ ಯುವ ಮಹೋತ್ಸವ
ವಿಜಯಪುರ : ಆರೋಗ್ಯ ಜೀವನದ ಭಾಗ್ಯ, ಸ್ವಚ್ಚತೆ ಆರೋಗ್ಯದ ಬಾಗಿಲು ಎಂದು ನವದೆಹಲಿಯ ಲಾಡಲಿ ಫೌಂಡೇಶನ್ ರಾಷ್ಟ್ರೀಯ ಸಲಹೆಗಾರ ಡಾ.ಜಾವೀದ ಜಮಾದಾರ ಹೇಳಿದರು.
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಟ್ಯಾಂಡರ್ಡ್ ಚಾರ್ಟೆಡ್ ಸಿಎಸ್ ಆರ್ ಯೋಜನೆಯ ಪ್ರಾಯೋಜಕತ್ವ ಹಾಗೂ ನವದೆಹಲಿ ಲಾಡಲಿ ಫೌಂಡೇಶನ್, ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಯುವ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಚತೆ ಆರೋಗ್ಯದ ಬೀಗದ ಕೈ ಇದ್ದಂತೆ, ಹೀಗಾಗಿ ಸ್ವಚ್ಚತೆ ಅರಿವು ಮೂಡಿಸಲು ಲಾಡಲಿ ಫೌಂಡೇಶನ್ ೧೦೦ ಜಿಲ್ಲೆಗಳಲ್ಲಿ ಈ ಮಹೋತ್ಸವ ಆಯೋಜಿಸಿದೆ, ಸಂಸ್ಕತಿ ಹಾಗೂ ಸ್ವಚ್ಚತೆ ನಮ್ಮ ಜೀವನದ ಭಾಗವಾಗಬೇಕು, ಹೀಗಾಗಿ ನಮ್ಮ ದೇಶದ ಭವ್ಯ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮದ ಮೂಲಕ ಸ್ವಚ್ಚತೆಯ ಬಗ್ಗೆ ೧೦೦ ಜಿಲ್ಲೆಗಳಲ್ಲಿ ಯುವ ಮಹೋತ್ಸವ ಆಯೋಜಿಸಲಾಗುತ್ತಿದೆ, ವಿಜಯಪುರ ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಿದೆ ಎಂದರು.
ಸಮಾಜ ಸೇವೆಯ ಭಾಗವಾಗಿ ಪ್ರತಿಷ್ಠಾನ ವತಿಯಿಂದ ಈಗಾಗಲೇ ಅತ್ಯಾಧುನಿಕ ಎ.ಐ. ತಂತ್ರಜ್ಞಾನದ ಶೌಚಾಲಯ ನಿರ್ಮಾಣ, ಸರ್ಕಾರಿ ಶಾಲೆಗಳಲ್ಲಿ ನೈರ್ಮಲ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸಲಾಗುತ್ತಿದೆ ಎಂದರು.
ಲಾಡಲಿ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವೇಂದ್ರ ಗುಪ್ತಾ ಮಾತನಾಡಿ, ಲಾಡಲಿ ಫೌಂಡೇಶನ್ ಲಾಭ ರಹಿತ ಸ್ವಯಂ ಸೇವಾ ಸಂಸ್ಥೆಯಾಗಿದೆ, ನಿನ್ನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ೧೫ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರತಿಷ್ಠಾನದ ಕಾರ್ಯಕ್ಕೆ ಕೈ ಜೋಡಿಸಿರುವುದು ಅಭಿಮಾನ ಹಾಗೂ ಹೆಮ್ಮೆ ಮೂಡಿಸಿದೆ ಎಂದರು. ಈಗಾಗಲೇ ವಿಜಯಪುರ ಜಿಲ್ಲೆಯನ್ನು ಸಾಮಾಜಿಕ ಸೇವೆಯ ಭಾಗವಾಗಿ ದತ್ತು ಸ್ವೀಕರಿಸಲಾಗಿದ್ದು, ಸೇವಾ ಕಾರ್ಯಚಟುವಟಿಕೆಗಳು ಮುಂದುವರೆಯಲಿವೆ ಎಂದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ೧೫ ಸಾವಿರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಸ್ವಚ್ಚತೆ ವಿಷಯವಾಗಿ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನಂತರ ಭರತನಾಟ್ಯ, ಕಥಕ್, ಕೋಲಾಟ, ದೇಶಭಕ್ತಿ ಗೀತೆಗಳ ಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆದವು.
ಲಾಡಲಿ ಫೌಂಡೇಷನ್ ರಾಯಭಾರಿ shifa Jamadar ಹಾಗೂ ಲಾಡಲಿ ಫೌಂಡೇಶನ್ ಪ್ರಮುಖರಾದ ಸುರಭಿ ಸಿಂಗ್, ಶಿವಕುಮಾರ, ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಾಹುಲ್ ಡೋಂಗ್ರೆ, ಎನ್.ಎಸ್.ಎಸ್.ಜಿಲ್ಲಾ ನೋಡೆಲ್ ಅಧಿಕಾರಿ ಪ್ರಕಾಶ ರಾಠೋಡ, ಅಂಬಣ್ಣಾ ಲಾಳಶೇರಿ, ಸಲೀಂ ಮಕಾನದಾರ, ಆರ್.ಬಿ. ಉಪಾಸೆ, ಸುರೇಶ ಬಿಜಾಪುರ, ಎಸ್.ಬಿ. ಕಡಕೋಳ, ನಬಿ ಜಮಾದಾರ, ಅಬರಾರ್ ಸುತಾರ, ಪ್ರೀತಿ ಪತ್ತಾರ, ಸರಿತಾ ಚಕ್ರಸಾಲಿ, ರಜನಿ ಸಂಬಣ್ಣಿ ಪಾಲ್ಗೊಂಡಿದ್ದರು.