ಅನೈತಿಕ ಸಂಬಂಧ ಹಾಗೂ ಹಳೆ ದ್ವೇಷದ ಹಿನ್ನೆಲೆ ಯುವಕನೊಬ್ಬನನ್ನು ಕೊಡಲಿಯಿಂದ ಹೊಡೆದು ಕೊಲೆ
ರಾಯಚೂರು : ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಅನೈತಿಕ ಸಂಬಂಧ ಹಾಗೂ ಹಳೆ ದ್ವೇಷದ ಹಿನ್ನೆಲೆ ಯುವಕನೊಬ್ಬನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ. ಬಳ್ಳಾಪುರ ಗ್ರಾಮದ ವಿಜಯ ಕುಮಾರ್ (23) ಕೊಲೆಯಾದ ಯುವಕನಾಗಿದ್ದಾನೆ.
ದಿನ್ನಿ ಗ್ರಾಮದ ಪ್ರಸಾದ್, ಮಲ್ಲೇಶ್, ಮಲ್ಲಿಕಾರ್ಜುನ್ ಹಾಗೂ ಅಮರೇಶ್ ಎಂಬುವರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪ್ರಸಾದ್ ಅವರ ಪತ್ನಿ ಮತ್ತು ವಿಜಯ ಕುಮಾರ್ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಅನುಮಾನದಿಂದ ಕಳೆದ ಮೂರು ತಿಂಗಳಿನಿಂದ ಪ್ರಸಾದ್ ವಿಜಯ ಕುಮಾರ್‌ಗಾಗಿ ಹುಡುಕಾಟ ನಡೆಸುತ್ತಿದ್ದನೆಂದು ತಿಳಿದುಬಂದಿದೆ.
ನಿನ್ನೆ ಬುಳ್ಳಾಪುರ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಯುತ್ತಿತ್ತು. ಈ ವೇಳೆ ವಿಜಯ ಕುಮಾರ್ ಕೂಡ ಅಲ್ಲಿದ್ದನು. ಅವನು ಅಲ್ಲಿರುವುದನ್ನು ಖಚಿತಪಡಿಸಿಕೊಂಡ ಪ್ರಸಾದ್, ಹಿಂಬದಿಯಿಂದ ಬಂದು ಕೊಡಲಿಯಿಂದ ವಿಜಯ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ವಿಜಯ ಕುಮಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಪ್ರಸಾದ್ ಸೇರಿದಂತೆ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ಗ್ರಾಮದಲ್ಲಿ ಈ ಘಟನೆ ಆತಂಕದ ವಾತಾವರಣ ನಿರ್ಮಾಣವಾಗಿದೆ.



















