ರಾಯಚೂರು : ಕಳೆದ ಒಂದು ತಿಂಗಳ ಹಿಂದೆ ನಗರದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಉಂಟಾದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ ಜಿಲ್ಲಾಧಿಕಾರ ಚಂದ್ರಶೇಖರ ನಾಯಕ ಅವರು ನಗರಸಭೆ ಅಧಿಕಾರಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಪರಿಶೀಲನೆ ಮಾಡುವಂತೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಾಂತಿ ಭೇದಿ ಪ್ರಕರಣಗಳ ಮತ್ತು ಜಿಲ್ಲೆಯ ಗ್ರಾಮೀಣ ಜನರ ಸುರಕ್ಷತೆ ಪರಿಶೀಲನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜನರ ಆರೋಗ್ಯದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು.ನಗರದಲ್ಲಿ ಜನರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಬಗ್ಗೆ ಪರಿಶೀಲಿಸಬೇಕು.
ನಗರದಲ್ಲಿ ಇರುವ ಸಾರ್ವಜನಿಕ ಕುಡಿಯುವ ನೀರು ಸಂಗ್ರಹ ಟ್ಯಾಂಕ್‌ಗಳ ಸ್ವಚ್ಚತೆಗೆ ಆಧ್ಯತೆ ನೀಡಬೇಕು. ಹಂತ ಹಂತವಾಗಿ ಪ್ರತಿಯೊದು ಟ್ಯಾಂಕ್ ಸ್ವಚ್ಚಗೊಳಿಸಬೇಕೆಂದು ಆದೇಶಿಸಿದರು. ಜನರ ಆರೋಗ್ಯ ಮುಖ್ಯವಾಗಿದೆ. ಅಧಿಕಾರಿಗಳ ಈ ಬಗ್ಗೆ ಸಕ್ರೀಯವಾಗಿ ಕೆಲಸ ಮಾಡಬೇಕು. ನೀರು ಶುದ್ಧೀಕರಣದ ಬಗ್ಗೆ ಸಂಬಂಧ ಪಟ್ಟ ಅಧಿಕಾರಿ ಖಾತ್ರಿ ಪಡಿಸಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು. ರಾಯಚೂರು ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳು ಕಾರ್ಮಿಕರನ್ನು ನೇಮಿಸಿಕೊಂಡು ಟ್ಯಾಂಕ್‌ಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.
ದೇವದುರ್ಗ ಹಾಗೂ ಲಿಂಗಸೂಗೂರು ತಾಲೂಕುನಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ಜನರ ಅರೋಗ್ಯ ತಪಾಸಣೆಯ ವಿಚಾರಣೆಗಾಗಿ ಮುಂಚಿತವಾಗಿ ಗ್ರಾಮ ಪಂಚಾಯತ್ ಹಾಗೂ ಆಶಾಕಾರ್ಯಕರ್ತೆರ ಸಹಯೋಗದೊಂದಿಗೆ ಊರಿನ ಗ್ರಾಮಸ್ಥರಿಗೆ ಸಲಹೆ ಸೂಚನೆ ನೀಡಬೇಕು.
ತಾಲೂಕು ಅರೋಗ್ಯ ಅಧಿಕಾರಿಗಳ ಮೂಲಕ ಪ್ರತಿಯೊಂದು ಹಳ್ಳಿ ಹಳ್ಳಿಗೆ ಭೇಟಿ ಕೊಟ್ಟು ಊರಿನ ಗ್ರಾಮಸ್ಥರ ಅರೋಗ್ಯವನ್ನು ಪರಿಶೀಲನೆ ಮಾಡಿ ಕಾಯಿಲೆಗಳಿಗೆ ತಕ್ಕಂತೆ ಸೂಕ್ತ ಚಿಕಿತ್ಸೆ ನೀಡಬೇಕು.ಮತ್ತು ತುರ್ತು ಚಿಕಿತ್ಸೆ ಕಂಡು ಬಂದರೆ ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ಕರೆ ತಂದು ಚಿಕಿತ್ಸೆ ನೀಡಬೇಕು ಎಂದು ಆಸ್ಪತ್ರೆ ವೈಧಾದಿಕಾರಿಗಳಿಗೆ ಸೂಚನೆ ನೀಡಿದರು.
15 ದಿನಗಳಿಗೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅರೋಗ್ಯದ ಬಗ್ಗೆ ವಿಚಾರಣೆ ಮಾಡಬೇಕು ಎಂದರು. ಚಿಕಿತ್ಸೆಯ ಮೂಲಭೂತಸೌಕರ್ಯಗಳಿಗೆ ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕ ಬಸವರಾಜ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು, ಡಾ. ಗಣೇಶ, ಡಾ. ನಂದಿತಾ ಹಾಗೂ ಡಾ. ಯಶೋಧ ಇದ್ದರು.