ಕಾಂಗ್ರೆಸ್ ಮುಖಂಡರ ವಿರುದ್ಧ ಎ.ಎಸ್ ಪಾಟೀಲ ನಡಹಳ್ಳಿ ವಾಗ್ದಾಳಿ..!
ವರದಿ: ಬಸವರಾಜ ಕುಂಬಾರ ಮುದ್ದೇಬಿಹಾಳ, ವಿಜಯಪುರ
ಮುದ್ದೇಬಿಹಾಳ: ಬಡವರು, ದಲಿತರು, ರೈತರು, ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸ್ಥಳೀಯ ಶಾಸಕರು, ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದ ಕಾಂಗ್ರೆಸ್ ಮುಖಂಡರು ಇದರ ವಿರುದ್ಧ ಧ್ವನಿ ಎತ್ತದೆ ತುಷ್ಟೀಕರಣ ಪಾಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಶುಕ್ರವಾರ ವಾಗ್ದಾಳಿ ನಡೆಸಿದರು.
ರೈತರ ಹೋರಾಟದಲ್ಲಿ ಭಾಗವಹಿಸಲು ಬಂದಿದ್ದ ಅವರು, ಪಟ್ಟಣದಲ್ಲಿ ಬಡವರು, ದಲಿತರು, ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅತಿಕ್ರಮಣ ತೆರವು ನೆಪದಲ್ಲಿ ಧ್ವನಿ ಇಲ್ಲದವರಿಗೆ ತೊಂದರೆ ಕೊಡಲಾಗುತ್ತಿದೆ. ಬಡವರು, ದಲಿತರಿಗೆ ಒಂದು ನ್ಯಾಯ, ಮತ್ತೊಂದು ಸಮುದಾಯಕ್ಕೆ ಇನ್ನೊಂದು ನ್ಯಾಯದಂತೆ ನಡೆದುಕೊಳ್ಳಲಾಗುತ್ತಿದೆ ಎಂದರು.
ಕೆರೆ, ಶಾಲೆ, ಸ್ಮಶಾನ ಅತಿಕ್ರಮಣ ತೆರವುಗೊಳಿಸುವಂತೆ ಸುಪ್ರೀಂಕೋರ್ಟ ಆದೇಶವಿದ್ದರೂ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಪಟ್ಟಣದ ಇಂದಿರಾ ವೃತ್ತದಲ್ಲಿರುವ ಕೆರೆಯನ್ನು ಯಾರು ಒತ್ತುವರಿ ಮಾಡಿಕೊಂಡಿದ್ದಾರೆ. ಶಿರೋಳ ರಸ್ತೆ ಅತಿಕ್ರಮಿಸಿ ಯಾರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹಿಂದುಗಳ ೧೦ ಎಕರೆ ಸ್ಮಶಾನವನ್ನು ಯಾರು ಅತಿಕ್ರಮಿಸಿದ್ದಾರೆ ಅನ್ನೋದು ಗೊತ್ತಿದ್ದರೂ ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲ ಎಂದು ದೂರಿದರು.
ಇಂದಿರಾನಗರದಲ್ಲಿ ದಲಿತರು ಹಾಕಿಕೊಂಡಿದ್ದ ಶೆಡ್, ತಹಶೀಲ್ದಾರ್ ಕಚೇರಿ ಹತ್ತಿರ ಬಡವರ ಅಂಗಡಿಗಳು, ಪಟ್ಟಣದ ರಸ್ತೆ ಪಕ್ಕದಲ್ಲಿನ ಡಬ್ಬಾ ಅಂಗಡಿ, ರಸ್ತೆ ಪಕ್ಕದಲ್ಲಿ ತರಕಾರಿ ವ್ಯಾಪಾರ ಮಾಡುವವರು ಸೇರಿ ಕೆಳವರ್ಗದವರ ಮೇಲೆ ದೌರ್ಜನ್ಯ ನಡೆಸಿರುವ ಅಧಿಕಾರಿಗಳು ಇಂದಿರಾ ವೃತ್ತ, ಶಿರೋಳ ರಸ್ತೆ, ಕೆರೆ ಅತಿಕ್ರಮಣದಾರರನ್ನು ತೆರವುಗೊಳಿಸುವ ಯಾವುದೇ ಪ್ರಯತ್ನ ನಡೆಸಿಲ್ಲ. ಇದು ಏನನ್ನು ತೋರಿಸುತ್ತದೆ ಅನ್ನೋದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಿಲ್ಲಾದಲ್ಲಿ ಕೋಟೆಗೋಡೆ ಹತ್ತಿದ ಹಳೇಯ ದನದ ಕೊಂಡವಾಡೆ ಜಾಗದಲ್ಲಿ ಮದರಸಾ ಕಟ್ಟಿಸಲಾಗುತ್ತಿದೆ. ಮುಖ್ಯಾಧಿಕಾರಿಯೇ ದೌರ್ಜನ್ಯ ನಡೆಸಲು, ತುಷ್ಟೀಕರಣ ನೀತಿ ಅನುಸರಿಸಲು ಮುಂದಾದರೆ ಕುರ್ಚಿಯಿಂದ ಇಳಿಸೋದು ಹೇಗಂತ ಗೊತ್ತಿದೆ. ತಹಶೀಲ್ದಾರ್, ಮುಖ್ಯಾಧಿಕಾರಿ ಹಿಂದೆ ಎಂಎಲ್‌ಎ ಇರುವುದೂ ಗೊತ್ತಿದೆ. ಮುಸ್ಲೀಮರು ಶಾಸಕರ ದತ್ತುಪುತ್ರರಾಗಿರುವುದರಿಂದ ಅವರನ್ನು ಮುಟ್ಟೋ ದಮ್ ನಿಮಗಿಲ್ಲದಂತಾಗಿದೆ ಎಂದು ಕುಟುಕಿದರು.
ನಾನು ಶಾಸಕನಾಗಿದ್ದಾಗ ಬೆಂಗಳೂರು ಬೇಕರಿ ಪಕ್ಕ ಪುಢಾರಿಯೊಬ್ಬ ರಸ್ತೆ ಮೇಲೆ ಅಂಗಡಿ ಹಾಕಿದ್ದ. ಇದನ್ನು ಪ್ರಶ್ನಿಸಿದ ರಾವುಸಾಬ್ ದೇಸಾಯಿ ಎನ್ನುವವರ ಮೇಲೆ ದಬ್ಬಾಳಿಕೆ ಮಾಡಿದ್ದ. ಸತ್ಯ ಇದ್ದರೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳುವಂತೆ ಸಿಪಿಐಗೆ ಹೇಳಿದ್ದೆ. ಆಗ ಇದೇ ಶಾಸಕರು ಆ ಪುಢಾರಿಯನ್ನು ರಕ್ಷಿಸಲು ಪೊಲಿಸ್ ಠಾಣೆಗೆ ಬಂದಿದ್ದರು. ಬಡವರು ಅಂಗಡಿ ಹಾಕೊಂಡ್ರೆ ಏನಾಯ್ತು ಅಂತ ಕೇಳಿದ್ದರು. ಇವತ್ತಿಗೂ ಅವನ ಅಂಗಡಿ ತೆಗೆದಿಲ್ಲ. ಆದರೆ ಸಾವಿರಾರು ಬಡಜನರ ಅಂಗಡಿ ಒಡೆದು ಹಾಕ್ತಿದ್ದೀರಲ್ಲ ನಾಚಿಕೆ ಆಗೊಲ್ವೆ ನಿಮಗೆ. ಇವತ್ಯಾಕೆ ನೀವು ಪೊಲೀಸ್ ಠಾಣೆಗೆ ಬರ್ತಿಲ್ಲ. ಬಡವರ ಪರ ಯಾಕೆ ನಿಲ್ತಿಲ್ಲ ಎಂದು ಚಾಟಿ ಬೀಸಿದರು.
ಬಜಾರನ ಕೆಲವು ಪುಢಾರಿಗಳೇ ನನ್ನ ವಿರುದ್ಧ ಅಪಪ್ರಚಾರ ಮಾಡಿ ಕಾಂಗ್ರೆಸ್ ಪರ ಓಟ್ ಹಾಕಿಸಿದ್ದರು. ಈಗ ಬಡವರ ಮೇಲೆ ಅನ್ಯಾಯ ಆಗ್ತಿದೆ. ಅವರೆಲ್ಲ ಎಲ್ಲಿ ಮಲಕ್ಕೊಂಡಿದ್ದಾರೆ. ನಡಹಳ್ಳಿ ಅಧಿಕಾರಕ್ಕೆ ಬಂದ್ರೆ ಬಜಾರ್ ಕಿತ್ತಿಸ್ತಾರೆ, ಅದು ಕಿತ್ತಿಸ್ತಾರೆ, ಇದು ಕಿತ್ತಿಸ್ತಾರೆ ಎಂದು ಅಪಪ್ರಚಾರ ಮಾಡಿದ್ರಲ್ಲ. ಈಗ ಬಜಾರ್ ಮಾರ್ಕೆಟ್ ಕಿತ್ತಿಸಿದ್ದು ಯಾರು ಎಂದು ಬಿಸಿ ಮುಟ್ಟಿಸಿದರು.
ಶಿವಪುರ ಎಂಬಾತ ಕಾಂಗ್ರೆಸ್ ಲೀಡರ್. ಅವನ ವಾರ್ಡನಲ್ಲಿ ೩೦-೪೦ ಜನರಿಗೆ ಶೆಡ್ಡು ಹಾಕಿಸಿದ್ದ. ಅವನ ಮೇಲೆ ಬಹಳಷ್ಟು ಕಂಪ್ಲೆಟ್ ನನ್ಹತ್ರ ಬಂದಿದ್ದವು. ಅವನಿಗೇನು ತೊಂದರೆ ಕೊಡ್ಲಿಲ್ಲ. ಹೋಗ್ಲಿ ಬಿಡು ಬಡವರಿಗೆ ಅನುಕೂಲ ಆಗ್ತಿದೆ ಎಂದು ಸುಮ್ಮನಿದ್ದೆ. ಈಗೇನಾಯ್ತು. ೩೦-೪೦ ಜನರ ಶೆಡ್ ಒಡೆದು ಹಾಕಿದರಲ್ಲ ಎಂದು ಕುಟುಕಿದರು.