87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ
ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ : ಜಿಲ್ಲಾಧಿಕಾರಿ ಟಿ.ಭೂಬಾಲನ್
ವಿಜಯಪುರ, ಅಕ್ಟೋಬರ್,09 : ಭಾರತವು ಹಲವು ವೈವಿಧ್ಯಗಳನ್ನು ಒಳಗೊಂಡ ದೇಶವಾಗಿದ್ದು, ಕರ್ನಾಟಕ ತನ್ನದೇಯಾದ ವಿಶಿಷ್ಟತೆ ಹೊಂದಿದ್ದು, ರಾಜ್ಯದ ಜನರ ದೈನಂದಿನ ಜೀವನದ ಕನ್ನಡ ಭಾಷೆಯ ಬಗ್ಗೆ ನಿರಂತರವಾಗಿ ಅಭಿಮಾನವಿರಲಿ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಬುಧವಾರ ಅವರು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಿ, ಭುವನೇಶ್ವರಿ ದೇವಿಗೆ ಮಾಲಾಪರ್ಣೆ ಮಾಡಿ ಮಾತನಾಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಕನ್ನಡ ಜ್ಯೋತಿ ರಥ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಚರಿಸಲಿದೆ. ಕನ್ನಡ ಜ್ಯೋತಿ ರಥಕ್ಕೆ ಸಾರ್ವಜನಿಕರು ಅಭೂತಪೂರ್ವ ಸ್ವಾಗತ ಕೋರಿ ಕನ್ನಡ ಸಾಹಿತ್ಯ ಸಮೇಳನದ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬರೂ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನವೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕು. ನಾಡುನುಡಿಯ ಬಗ್ಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ ಮಾತನಾಡಿ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಪರಂಪರೆಗಳನ್ನು ನಾವು ಅನುಸರಣೆ ಮಾಡಬೇಕು. ಇಂದಿನ ಯುವ ಜನಾಂಗಕ್ಕೆ ಕನ್ನಡ ನಾಡು ನುಡಿಯ ಬಗ್ಗೆ ಹಿರಿಯರ ತ್ಯಾಗ ಹಾಗೂ ಸಾಧನೆಗಳನ್ನು ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಕನ್ನಡ ಜ್ಯೋತಿ ರಥಯಾತ್ರೆಯೂ ಸಿದ್ದೇಶ್ವರ ದೇವಸ್ಥಾನದಿಂದ ನಗರದ ಮಾರುಕಟ್ಟೆ ರಸ್ತೆ ಮಾರ್ಗವಾಗಿ ಗಾಂಧಿವೃತ್ತದ ಮೂಲಕ ವಿವಿಧ ಕಲಾಮೇಳಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ರಥವನ್ನು ಇಂಡಿ ತಾಲೂಕಿಗೆ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ವಿಜಯಪುರ ಉಪವಿಭಾಗಾಧಿಕಾರಿ, ಗುರುನಾಥ ದಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್.ಎಚ್.ನಾಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ತಹಶೀಲ್ದಾರ ಪ್ರಕಾಶ ಚನಗೊಂಡ, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಶಿಂಪೀರ್ ವಾಲೀಕಾರ, ಫಯಾಜ್ ಕಲಾದಗಿ, ಅಡಿವೆಪ್ಪ ಸಾಲಗಲ್, ಅಭಿಷೇಕ್ ಚಕ್ರವರ್ತಿ, ಆನಂದ ಕುಲಕಣಿ, ಸುರೇಶ ಜತ್ತಿ, ದೇವೆಂದ್ರ ಮೆರೆಕರ್, ವಿದ್ಯಾವತಿ ಅಂಕಲಗಿ, ರವಿ ಕಿತ್ತೂರ, ಶ್ರೀಶೈಲ ಆಳೂರ ಸೇರಿದಂತೆ ವಿವಿಧ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.