ವಿಜಯಪುರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೃದಯದಲ್ಲಿ ಬೆಳೆದಿದ್ದ ಸುಮಾತು 200 ಗ್ರಾಂ ತೂಕದ ಗಡ್ಡೆಯನ್ನು ಕೀಹೋಲ್ ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.ಎಂಡೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ರವಿ ಘಟ್ನಟ್ಟಿ ಅವರ ನೇತೃತ್ವದ ತಂಡ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ. ಈ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅರವಳಿಕೆ ತಜ್ಞ ಡಾ. ಪ್ರಶಾಂತ ಬಿರಾದಾರ, ಸಿಟಿವಿಎಸ್ ನರ್ಸಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ರವಿ ಘಟ್ನಟ್ಟಿ, ಎಂಡೋಸ್ಕೋಪಿಕ್ ಹೃದಯ ಶಸ್ತ್ರಚಿಕಿತ್ಸೆ ತಂಡವು 48 ವರ್ಷದ ಮಹಿಳೆಯ ಹೃದಯದಲ್ಲಿ ಕಂಡುಬಂದ ಕ್ಯಾನ್ಸರ್‌ರಹಿತ ಗಡ್ಡೆಯನ್ನು (ಲೆಫ್ಟ್ ಏಟ್ರಿಯಲ್ ಮಿಕ್ಸೋಮ) ಸಂಪೂರ್ಣ ಎಂಡೋಸ್ಕೋಪಿಕ್ (ಕೀಹೋಲ್) ತಂತ್ರದ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ. ಆರು ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ತಿಳಿಸಿದರು.
ಕಾರ್ಡಿಯಾಕ್ ಮಿಕ್ಸೋಮ ಎಂಬುದು ಹೃದಯದ ಒಳಭಾಗದಲ್ಲಿ ಬೆಳೆಯುವ ಸೌಮ್ಯ(ಬಿನೈನ್) ಗಡ್ಡೆಯಾಗಿದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ರೋಗಿಯು ಉಸಿರಾಟದ ತೊಂದರೆ, ಜ್ವರ, ದೌರ್ಬಲ್ಯ ಮುಂತಾದ ಲಕ್ಷಣಗಳನ್ನು ಎದುರಿಸುತ್ತಾರೆ. ಕಠಿಣ ಪರಿಸ್ಥಿತಿಯಲ್ಲಿ, ರಕ್ತಪ್ರವಾಹದ ಅಡ್ಡ ಪರಿಣಾಮದಿಂದ ಸ್ಟ್ರೋಕ್‌ಗಳಂತಹ ಜೀವಕ್ಕೆ ಅಪಾಯಕಾರ ಸಮಸ್ಯೆಗಳಿಗೂ ಕಾರಣವಾಗಬಹುದು. ಬೇರೆ ಕಡೆ ಸಾಮಾನ್ಯವಾಗಿ ಇಂಥ ಶಸ್ತ್ರಕ್ರಿಯೆಯನ್ನು,ಎದೆಮೂಳೆ (ಸ್ಟರ್ನೋಟೋಮಿ) ಕತ್ತರಿಸುವ ವಿಧಾನ ಬಳಸುತ್ತಾರೆ. ಆದರೆ, ಇಲ್ಲಿನ ಶಸ್ತ್ರಚಿಕಿತ್ಸೆ ತಂಡವು ಬಲ ಸ್ತನದ ಮೇಲ್ಭಾಗದ ಸುತ್ತ ಸಣ್ಣ ರಂದ್ರವನ್ನು ಮಾಡಿ, ‘ಪೆರಿ-ಏರಿಯೋಲರ್ ಅಪ್ರೋಚ್’ ವಿಧಾನವನ್ನು ಅನುಸರಿಸಿದೆ ಶಸ್ತ್ರಚಿಕಿತ್ಸೆ ನಡೆಸಿದೆ. ಕೀಹೋಲ್ ವಿಧಾನ ಬಳಕೆಯಿಂದ ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ನೋವು ಕಡಿಮೆ ಇರುತ್ತದೆ. ಅಲ್ಲದೇ, ಚಿಕ್ಕರಂದ್ರ ಮಾಡುವುದರಿಂದ ಗಾಯದ ಗುರುತು ಕೂಡ ಕಡಿಮೆ ಇರುತ್ತದೆ. ರೋಗಿ ಆಸ್ಪತ್ರೆಯಲ್ಲಿ ಕಡಿಮೆ ಅವಧಿಯಲ್ಲಿ ಶೀಘ್ರ ಚೇತರಿಕೆಯಾಗುತ್ತಾರೆ. ಅಷ್ಟೇ ಅಲ್ಲ, ರೋಗಿಗಳು ಗುಣಮುಖರಾಗಿ ಬೇಗ ಸಾಮಾನ್ಯ ಚಟುವಟಿಕೆಗಳಿಗೆ ಮರಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.ಆಸ್ಪತ್ರೆಯ ವೈದ್ಯರ ಈ ಯಶಸ್ವಿ ಶಸ್ತ್ರಚಿಕಿತ್ಸೆ ಕಾರ್ಯಕ್ಕೆ ಡೀಮ್ಡ್ ವಿವಿ ಕುಲಾಧಿಪತಿ ಬಿ. ಎಂ. ಪಾಟೀಲˌ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜˌ ಕುಲಪತಿ ಡಾ. ಅರುಣ ಚಂ. ಇನಾಮದಾರˌ ಕುಲಸಚಿವ ಡಾ. ಆರ್. ವಿ. ಕುಲಕರ್ಣಿˌ ವೈಧ್ಶಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.



















