ಇಂಡಿ : ಬರಗುಡಿ ಗ್ರಾಮದ ಎರಡು ಹಲ್ಲಿನ ಕಿಲಾರಿ ಹೋರಿಗೆ ಚಾಂಪಿಯನ್ನಾಗಿ ಆಯ್ಕೆ ಯಾಗಿದೆ. ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂ. ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವ ಅಂಗವಾಗಿ ಜಾನುವಾರ ಜಾತ್ರೆ ಆಯೋಜಿಸಲಾಗಿತ್ತು.
ಅಂದಾಜು ೧೫೦೦ ಕ್ಕೂ ಹೆಚ್ಚು ಜಾನುವಾರಗಳನ್ನು ರೈತರು ಇಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ತಂದಿದ್ದರು. ಈ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಇಲ್ಲಿನ ಕಮರಿಮಠದ ವತಿಯಿಂದ ಉತ್ತಮ ಬಹುಮಾನ ನೀಡಲಾಯಿತು. ಈ ಜಾನುವಾರ ಜಾತ್ರೆಯಲ್ಲಿ ನೆರೆಯ ಬರಗುಡಿ ಗ್ರಾಮದ ಮಾದಣ್ಣ ಸೋಮನಿಂಗ ಕೆಳಗಿನಮನಿ ಎಂಬ ರೈತರ ೨ ಹಲ್ಲಿನ ಕಿಲಾರಿ ಹೋರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ಹೋರಿಗೆ ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ೫ ತೊಲಿ ಬೆಳ್ಳಿಯನ್ನು ಬಹುಮಾನ ರೂಪದಲ್ಲಿ ನೀಡಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ೮ ಜಾನುವಾರಗಳಿಗೆ ಪ್ರಥಮ, ೮ ದ್ವಿತೀಯ, ೮ ತೃತೀಯ ಬಹುಮಾನ ಕೂಡ ವಿತರಿಸಿ ಎತ್ತುಗಳ ಮಾಲಿಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಮರಿಮಠದ ಸೇವಾ ಸಮಿತಿಯ ಸದಸ್ಯರು, ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಭಕ್ತರು ಉಪಸ್ಥಿತರಿದ್ದರು.